ಮುಸ್ಲಿಮರಿಗೆ ನೀಡಿರುವ ಶೇ. 4ರ ಮೀಸಲಾತಿಯನ್ನು ಶೇ. 8ಕ್ಕೆ ಏರಿಸಲು ಒತ್ತಾಯ

Prasthutha|

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯಕ್ಕೆ ರಾಜ್ಯ ಸರಕಾರ ನೀಡಿರುವ ಮೀಸಲಾತಿಯನ್ನು ಹೆಚ್ಚಿಸಲು, ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರನ್ನು ಮುಸ್ಲಿಂ ಯುನಿಟಿ ಸಂಘಟನೆಯು ಒತ್ತಾಯಿಸಿದೆ.

- Advertisement -

ಮಂಗಳವಾರ ಸಂಘಟನೆಯ ಸಂಚಾಲಕ ಜಬ್ಟಾರ್ ಕಲ್ಬುರ್ಗಿ ಮತ್ತು ಪತ್ರಕರ್ತ ಬಿ.ಎಂ. ಹನೀಫ್ ನೇತೃತ್ವದ ನಿಯೋಗ, ಜಯಪ್ರಕಾಶ ಹೆಗ್ಡೆ ಅವರನ್ನು ಭೇಟಿ ಮಾಡಿ, ಪ್ರವರ್ಗ 2ಬಿ ನಲ್ಲಿ ನೀಡಿರುವ ಶೇ. 4ರ ಮೀಸಲಾತಿಯನ್ನು ಶೇ. 8ಕ್ಕೆ ಏರಿಸಲು ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ವಿಸ್ತ್ರತವಾದ ಮನವಿ ಪತ್ರವನ್ನು ನೀಡಿದೆ.

ರಾಜ್ಯ ಸರ್ಕಾರ ಹಿಂದೆ ನೇಮಿಸಿದ ಹಿಂದುಳಿದ ವರ್ಗಗಳ ಎಲ್ಲ ಆಯೋಗಗಳೂ ಮುಸ್ಲಿಮರನ್ನು ತೀವ್ರ ಹಿಂದುಳಿದ ಸಮುದಾಯ ಎಂದು ಗುರುತಿಸಿವೆ. ಕಾಂತರಾಜು ಅಧ್ಯಕ್ಷತೆಯ ಆಯೋಗ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 16ರಷ್ಟಿದೆ ಎಂದು ಗುರುತಿಸಿದೆ. ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಗೆ ಅನುಗುಣವಾಗಿ 2 ‘ಬಿ’ ಪ್ರವರ್ಗದ ಮೀಸಲಾತಿಯನ್ನು ಈಗ ನೀಡುತ್ತಿರುವ ಶೇ 4ರಿಂದ ಶೇ 8ಕ್ಕೆ ಹೆಚ್ಚಿಸಬೇಕಿದೆ. ಮುಸ್ಲಿಂ ಸಮುದಾಯದ ಸದ್ಯದ ಸ್ಥಿತಿಗತಿ ತಿಳಿದುಕೊಳ್ಳಲು ಪ್ರತ್ಯೇಕ ಸಮೀಕ್ಷೆಯನ್ನೂ ನಡೆಸಬೇಕು ಎಂದು ನಿಯೋಗದ ಸದಸ್ಯರು ಕೋರಿದರು.

- Advertisement -

ಮನವಿ ಪತ್ರವನ್ನು ಸ್ವೀಕರಿಸಿ, ನಿಯೋಗದ ಸದಸ್ಯರ ಜತೆ ಚರ್ಚೆ ನಡೆಸಿದ ಜಯಪ್ರಕಾಶ್ ಹೆಗ್ಡೆ ಅವರು, ತಾವು ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮುಸ್ಲಿಮರ ನಿಯೋಗವೊಂದು ಅಧಿಕೃತವಾಗಿ ಭೇಟಿಯಾಗಿ ಮನವಿ ಅರ್ಪಿಸಿದೆ. ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಯೋಗದ ಸದಸ್ಯೆ ಶಾರದಾ ನಾಯಕ್, ಮುಸ್ಲಿಂ ಸಮುದಾಯದ ಮುಖಂಡರಾದ ರಿಯಾಜ್ ಮುಲ್ಲಾ, ಮೌಲಾನಾ ಮೊಹಮ್ಮದ್ ಯೂನುಸ್, ಎಂ.ಎಲ್.ಸರ್ಕಾವಸ್, ನಜೀರ್ ಹರ್ಕಾರಿ, ಅಲ್ತಾಫ್ ಕಲ್ಬುರ್ಗಿ, ಚಿಕ್ಕಮಗಳೂರಿನ ಕೆ.ಎ.ಇಮ್ದಾದ್ ಇದ್ದರು

Join Whatsapp