ಮಂಗಳೂರು: ಕುದ್ರೋಳಿಯಲ್ಲಿ ಬಾಲಕಿ ಅನುಮಾನಾಸ್ಪದ ಸಾವು

Prasthutha|

ಮಂಗಳೂರು: ಇಲ್ಲಿನ ಕುದ್ರೋಳಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

- Advertisement -

ಅಸ್ಸಾಮ್ ಮೂಲದ ಪ್ರಸ್ತುತ ಕುದ್ರೋಳಿಯ ಸಿಪಿಸಿ ಕಾಂಪೌಂಡ್ ನಲ್ಲಿ ನೆಲೆಸಿದ್ದ ಸುಫಿಯಾ (17) ಸಾವನ್ನಪ್ಪಿದ ಬಾಲಕಿ.

ಮನೆಯಲ್ಲಿದ್ದ ಪತಿ ಸೈದುಲ್ಲಾ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತಿಯೇ ಕುತ್ತಿಗೆಗೆ ಶಾಲು ಬಿಗಿದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

- Advertisement -

ಕಳೆದ ರಾತ್ರಿ ಬಾಲಕಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ 6 ಗಂಟೆಗೆ ಸೈದುಲ್ಲಾ ನೆರೆ ಮನೆಗೆ ಬಂದು, ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಸುಫಿಯಾ ಮತ್ತು ಸೈದುಲ್ಲಾ ಪ್ರೀತಿಸಿ ಮನೆ ಬಿಟ್ಟು ಓಡಿ ಬಂದು ಮಂಗಳೂರಿನ ಕುದ್ರೋಳಿಯಲ್ಲಿ ನೆಲೆಸಿದ್ದರು. ಸೈದುಲ್ಲಾ ಪೈಟಿಂಗ್ ಕೆಲಸ ಮಾಡುತ್ತಿದ್ದ. ಆತನೊಂದಿಗೆ ಇತರ ಇಬ್ಬರು ಸ್ನೇಹಿತರು ಕೂಡ ಇದ್ದರು. ಅವರು ಕೂಡ ಇದೆ ಮನೆಯಲ್ಲಿ ನೆಲೆಸಿದ್ದರು. ಅವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಹೇಳಿದ್ದಾನೆ. ಆದರೆ ಸ್ಥಳೀಯರು ಇದು ಕೊಲೆಯಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪುತ್ರಿಯನ್ನು ಕೊಂದವರಿಗೆ ಶಿಕ್ಷೆಯಾಗಲಿ: ಸಂತ್ರಸ್ತೆಯ ತಂದೆ ಒತ್ತಾಯ

ಪುತ್ರಿಯ ಸಾವಿನ ಸುದ್ದಿ ಕೇಳಿ ಅಸ್ಸಾಮ್ ನಲ್ಲಿರುವ ತಂದೆ ತೀವ್ರ ಆಘಾತಗೊಂಡಿದ್ದು, ನನ್ನ ಪುತ್ರಿಯನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಸೈದುಲ್ಲಾ ಅಪಹರಿಸಿಕೊಂಡು ಹೋಗಿ ಕೊಂದು ಹಾಕಿದ್ದಾನೆ. ಅವನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

Join Whatsapp