ಬೆಂಗಳೂರು : ಉತ್ತರ ಪ್ರದೇಶದ ಗಾಝಿಯಾಬಾದ್ ನ ಲೋನಿಯಲ್ಲಿ ಮುಸ್ಲಿಂ ವೃದ್ಧನ ಮೇಲೆ ನಡೆದಿದ್ದ ದಾಳಿ ಕುರಿತ ವೀಡಿಯೊ ಪ್ರಸಾರಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರ ನೋಟಿಸ್ ಅನ್ನು ಪ್ರಶ್ನಿಸಿ ಟ್ವಿಟರ್ ಇಂಡಿಯಾ ಆಡಳಿತ ನಿರ್ದೇಶಕ ಮನೀಶ್ ಮಹೇಶ್ವರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜು.5ಕ್ಕೆ ಮುಂದೂಡಿದೆ.
ಉ.ಪ್ರ. ಪೊಲೀಸ್ ಪರ ನ್ಯಾಯವಾದಿ ಪ್ರಸನ್ನ ಕುಮಾರ್ ಮಾಡಿದ ಮನವಿಗೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾ. ಜಿ. ನರೇಂದರ್ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಗಾಝಿಯಾಬಾದ್ ಎಫ್ ಐಆರ್ ಗೆ ಸಂಬಂಧಿಸಿ ಜಾರಿಗೊಳಿಸಲಾದ ನೋಟಿಸ್ ಗೆ ಸಂಬಂಧಿಸಿ ಕ್ರಮ ಕೈಗೊಳ್ಳದಂತೆ ಉತ್ತರ ಪ್ರದೇಶ ಪೊಲೀಸರಿಗೆ ಮಧ್ಯಂತರ ತಡೆ ನೀಡಿ ಕೋರ್ಟ್ ಜೂ. 24ರಂದು ಆದೇಶಿಸಿತ್ತು.
ಗಾಝಿಯಾಬಾದ್ ಮುಸ್ಲಿಂ ವೃದ್ಧನ ಮೇಲೆ ಹಲ್ಲೆ ಕುರಿತ ವೀಡಿಯೊಗೆ ಸಂಬಂಧಿಸಿದ ದೂರಿನ ವಿಚಾರಣೆಗೆ ಹಾಜರಾಗುವಂತೆ ಲೋನಿ ಗಡಿ ಪೊಲೀಸ್ ಠಾಣೆ ಪೊಲೀಸರು ಮನೀಶ್ ಮಹೇಶ್ವರಿಗೆ ನೋಟಿಸ್ ಜಾರಿಗೊಳಿಸಿದ್ದರು.
ಹೈಕೋರ್ಟ್ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಈ ನಡುವೆ ಉತ್ತರ ಪ್ರದೇಶ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮುಸ್ಲಿಂ ವೃದ್ಧರೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ಈ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಲು ಒತ್ತಾಯಿಸಿ ಗುಂಪು ಹಲ್ಲೆ ನಡೆಸಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ವೀಡಿಯೊವೊಂದು ವೈರಲ್ ಆಗಿತ್ತು. ಈ ವೀಡಿಯೊಗೆ ಸಂಬಂಧಿಸಿ ಅದನ್ನು ಹಂಚಿಕೊಂಡ ಪತ್ರಕರ್ತರು, ಸುದ್ದಿ ಮಾಧ್ಯಮ, ಸಾಮಾಜಿಕ ಕಾರ್ಯಕರ್ತರು ಮತ್ತು ಹಂಚಿಕೊಳ್ಳಲಾದ ವೇದಿಕೆ ಟ್ವಿಟರ್ ವಿರುದ್ಧವೇ ಉತ್ತರ ಪ್ರದೇಶದಲ್ಲಿ ದೂರು ದಾಖಲಿಸಲಾಗಿದೆ.