ಗಾಝಾ: :ಗಾಜಾಪಟ್ಟಿಯಲ್ಲಿನ ದೊಡ್ಡ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್ ಪಡೆಗಳು ಇಂದು ನಸುಕಿನಲ್ಲಿ ದಾಳಿ ನಡೆಸಿದೆ. ರೋಗಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ರಕ್ಷಣೆ ಕೋರಿ ಆಶ್ರಯ ಬಯಸಿರುವ 30 ಸಾವಿರಕ್ಕೂ ಹೆಚ್ಚು ಜನರು ಈ ಆಸ್ಪತ್ರೆಯೊಳಗಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಯುದ್ಧ ಟ್ಯಾಂಕರ್‌ಗಳು, ಫಿರಂಗಿಗಳೊಂದಿಗೆ ಆಸ್ಪತ್ರೆಯನ್ನು ಸುತ್ತುವರಿದಿರುವ ಇಸ್ರೇಲ್ ಪಡೆಗಳು, ಗುಂಡಿನ ದಾಳಿ ನಡೆಸಿವೆ ಎಂದು ಆಸ್ಪತ್ರೆಯೊಳಗೆ ಆಶ್ರಯ ಪಡೆದಿರುವವರು ಹೇಳಿದ್ದಾರೆ.
ಮೂರು ತಿಂಗಳಿನಿಂದ ಚಿಕಿತ್ಸೆಯಲ್ಲಿರುವ ನಾನು ಈಗ ಒಳಗೆ ಸಿಲುಕಿಕೊಂಡಿದ್ದೇನೆ. ಯಾರಾದರೂ ಓಡಾಡುವುದು ಕಾಣಿಸಿದರೆ ಗುಂಡು ಹಾರಿಸುತ್ತಾರೆ. ವೈದ್ಯರು, ಆಂಬುಲೆನ್ಸ್‌ಗಳು ಸಹ ಓಡಾಡುವಂತಿಲ್ಲ ಎಂದು ಆಸ್ಪತ್ರೆಯೊಳಗಿರುವ ಅಬ್ಡೆಲ್-ಹದಿ ಸಯೀದ್ ಎಂಬವರು ತಿಳಿಸಿದ್ದಾಗಿ ವರದಿಯಾಗಿದೆ.
ರೋಗಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಆಶ್ರಯ ಬಯಸಿರುವ 30 ಸಾವಿರಕ್ಕೂ ಹೆಚ್ಚು ಜನರು ಈ ಆಸ್ಪತ್ರೆಯೊಳಗಿದ್ದಾರೆ. ಇದರ ವಿಶೇಷ ಶಸ್ತ್ರಚಿಕಿತ್ಸೆ ನಡೆಸುವ ಕಟ್ಟಡವನ್ನೇ ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ಗುಂಡಿನ ದಾಳಿ ನಡೆಸಿವೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.