ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ನಡೆಸಿದ ಪ್ರಕರಣದ ಆರೋಪಿಗಳ ಪೈಕಿ ಪರಶುರಾಮ್ ವಾಗ್ಮೋರೆ ಎಂಬಾತನನ್ನು ಗುರುತಿಸಿದ ಸಾಕ್ಷಿದಾರನೊಬ್ಬನಿಗೆ ನೇರವಾಗಿ ಮನೆಗೆ ತೆರಳಿ ಮತ್ತು ಫೋನ್ ಮೂಲಕ ಜೀವ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ. ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ನ್ಯಾಯಾಧೀಶರು, ಈ ರೀತಿಯ ವರ್ತನೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವಂತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳಿಗೆ ಮೌಖಿಕ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ವಿಚಾರಣೆಯು ಬೆಂಗಳೂರಿನ ಸಿವಿಲ್ ಕೋರ್ಟ್’ನಲ್ಲಿ ಸೆಷನ್ ನ್ಯಾಯಾಧೀಶರಾದ ರಾಮಚಂದ್ರ ಪಿ. ಹುದ್ದಾರ್ ಅವರ ಪೀಠ ನಡೆಸುತ್ತಿದೆ. ಈ ತಿಂಗಳ ವಿಚಾರಣೆಯ ಕೊನೆಯ ದಿನವಾದ ಇಂದು ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಆತನ ಸ್ನೇಹಿತನಾಗಿದ್ದ ದೌಲತ್ ಗುರುತಿಸುವ ಮತ್ತು ಇತರ ಪ್ರಕರಣಗಳ ಬಗ್ಗೆ ಸಾಕ್ಷಿ ಹೇಳಬೇಕಾಗಿತ್ತು. ಆದರೆ ಸಾಕ್ಷಿಯ ಮನೆಗೆ ನಾಲ್ಕು ಮಂದಿಯ ತಂಡ ಹೋಗಿ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದೆ ಮತ್ತು ಎರಡು ಮೂರು ಸಲ ಫೋನ್ ಮಾಡಿಯೂ ಜೀವ ಬೆದರಿಕೆ ಹಾಕಿದೆ ಎಂದು ಸರ್ಕಾರಿ ವಕೀಲ ಎಸ್. ಬಾಲನ್ ಅವರು ನ್ಯಾಯಾಧೀಶರಿಗೆ ತಿಳಿಸಿದ್ದಾರೆ.
ಇದೆಲ್ಲದರ ಮಧ್ಯೆ ಸಾಕ್ಷಿಯಾಗಿದ್ದ ದೌಲತ್ ಅವರು ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಗುರುತಿಸಿದ್ದು, ಈ ಹಿಂದೆ ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣದ ಆರೋಪಿಯಾಗಿದ್ದ ಎಂದು ಸಾಕ್ಷಿ ಹೇಳಿದ್ದಾರೆ.