ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಹೃಷಿಕೇಶ್ ದೇವ್ಡೀಕರ್ ಜಾಮೀನು ಅರ್ಜಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್

Prasthutha|

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 18ನೇ ಆರೋಪಿಯಾಗಿರುವ ಮಹಾರಾಷ್ಟ್ರದ ಔರಂಗಬಾದ್ನ ಹೃಷಿಕೇಶ್ ದೇವ್ಡೀಕರ್ ಅಲಿಯಾಸ್ ಮುರಳಿ ಅಲಿಯಾಸ್ ಶಿವ ಎಂಬಾತನಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿದೆ.

- Advertisement -

ನಿಗದಿತ ಅವಧಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿಲ್ಲವಾದ್ದರಿಂದ ಡಿಫಾಲ್ಟ್ ಜಾಮೀನು ಮಂಜೂರು ಮಾಡುವಂತೆ ಕೋರಿ ಹೃಷಿಕೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಅರ್ಜಿದಾರ ಹೃಷಿಕೇಶ್ ಬಂಧನಕ್ಕೂ ಮುನ್ನ ಆತನನ್ನು ಆರೋಪಿ ಎಂದು ಉಲ್ಲೇಖಿಸಲಾಗಿದೆ. ಆರೋಪಿಯ ವಿರುದ್ಧ ಐಪಿಸಿಯ 302, 120(ಬಿ), 114, 118, 109, 201, 203, 204, 35, ಶಸ್ತ್ರಾಸ್ತ್ರ ಕಾಯಿದೆಯ 25 (1), 25(1ಬಿ), 27(1), ಕೋಕಾ ಸೆಕ್ಷನ್ 3(1)(i), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿತ್ತು. ಹೀಗಾಗಿ, ಅರ್ಜಿದಾರರಿಗೆ ಸಿಆರ್ ಪಿಸಿ ಸೆಕ್ಷನ್ 167 ಉಪ ಸೆಕ್ಷನ್ (2) ರ ಅಡಿ ಡೀಫಾಲ್ಟ್ ಜಾಮೀನು ಕೋರಲಾಗದು” ಎಂದು ಪೀಠ ಆದೇಶದಲ್ಲಿ ಹೇಳಿದೆ.

- Advertisement -

ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ಎನ್. ನಾಯಕ್ ಅವರು “ಮೊದಲಿಗೆ ಆರೋಪಿ ನಾಪತ್ತೆಯಾಗಿದ್ದ. ಆನಂತರ ಜಾಮೀನು ರಹಿತ ವಾರೆಂಟ್ ಜಾಮೀನು ಮಾಡಿ ಬಂಧಿಸಿರುವುದರಿಂದ ಸಿಆರ್ ಪಿಸಿ ಸೆಕ್ಷನ್ 167 ಉಪ ಸೆಕ್ಷನ್ (2) ಅಡಿ ಜಾಮೀನು ಕೋರಲಾಗದು” ಎಂದು ವಾದಿಸಿದ್ದರು.

“ಅರ್ಜಿದಾರರನ್ನು ಬಂಧಿಸುವುದಕ್ಕೂ ಮುನ್ನ ಅವರ ವಿರುದ್ಧ ಮೊದಲ ಆರೋಪ ಪಟ್ಟಿಯನ್ನು 2018ರ ನವೆಂಬರ್ 23ರಂದು ಸಲ್ಲಿಸಲಾಗಿತ್ತು. ಆಗಲೇ ಪೂರಕ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಹೇಳಲಾಗಿತ್ತು. ಅಲ್ಲದೇ, 2020ರ ಜೂನ್ 25ರಂದು ಪೂರಕ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ, ಸಿಆರ್ ಪಿಸಿ ಸೆಕ್ಷನ್ 167 ಉಪ ಸೆಕ್ಷನ್ (2) ರ ಅಡಿ ಡಿಫಾಲ್ಟ್ ಜಾಮೀನು ಕೋರುವ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದಿದ್ದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಬಿ ಎಸ್ ಕಿರಣ್ ಅವರು “ಕೊಲೆ ಪ್ರಕರಣದಲ್ಲಿ ಅರ್ಜಿದಾರರನ್ನು ಬಂಧಿಸಿದ 90 ದಿನಗಳ ಒಳಗೆ ಅಂದರೆ 2020ರ ಏಪ್ರಿಲ್ 9ರ ಒಳಗೆ ಪೂರಕ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಅರ್ಜಿದಾರರನ್ನು 2020ರ ಜನವರಿ 9ರಂದು ಬಂಧಿಸಲಾಗಿತ್ತು. ಆದರೆ, ಈ ಅವಧಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ. ಪ್ರಮಾಣಿತ ಮಾರ್ಗಸೂಚಿಗಳನ್ನು (ಎಸ್ ಇಪಿ) ಪಾಲಿಸಿ ಸಿಆರ್ಪಿಸಿ ಸೆಕ್ಷನ್ 167 ಉಪ ಸೆಕ್ಷನ್ (2)ರ ಅಡಿ ಇಮೇಲ್ ಮೂಲಕ 2020ರ ಮೇ 4ರಂದು ಡಿಫಾಲ್ಟ್ ಜಾಮೀನು ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಬದಲಾಗಿ, ಆರೋಪ ಪಟ್ಟಿ ಸಲ್ಲಿಸಲು ಸಮಯ ವಿಸ್ತರಣೆ ಕೋರಿ 2020ರ ಮೇ 12ರಂದು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ಮಾನ್ಯ ಮಾಡಿತ್ತು. ಇದು ಸಿಆರ್ಪಿಸಿ ಸೆಕ್ಷನ್ 167 ಉಪ ಸೆಕ್ಷನ್ (2)ಕ್ಕೆ ವಿರುದ್ಧವಾಗಿದೆ” ಎಂದು ವಾದಿಸಿದ್ದರು.

ಗೌರಿ ಲಂಕೇಶ್ ಹತ್ಯೆಯ ಬಳಿಕ ಒಂದೂವರೆ ವರ್ಷ ಕಾಲ ಹೃಷಿಕೇಶ್ ತಲೆಮರೆಸಿಕೊಂಡಿದ್ದ. ಜಾರ್ಖಂಡ್ ನ ಧನಬಾಗ್ ಜಿಲ್ಲೆಯ ಕತ್ರಾಸ್ ನಲ್ಲಿ ಆರೋಪಿಯನ್ನು ವಿಶೇಷ ತನಿಖಾ ತಂಡದ ಪೊಲೀಸರು ವಶಕ್ಕೆ ಪಡೆದಿದ್ದರು. ಗೌರಿ ಹತ್ಯೆಗೆ ಬಳಸಿದ್ದ ಗನ್ ನಾಶಪಡಿಸಿದ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪ ಈತನ ಮೇಲಿದೆ.

(ಕೃಪೆ: ಬಾರ್ & ಬೆಂಚ್)



Join Whatsapp