ಹಾಡಹಗಲೇ ಗಾರ್ಮೆಂಟ್ಸ್ ಉದ್ಯಮಿ ಹತ್ಯೆ: ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು

Prasthutha|

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಪೊಲೀಸರ ಗುಂಡು ಸದ್ದು ಮಾಡಿದ್ದು ಹಾಡಹಗಲೇ ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಕೊಲೆಗೈದ ಪ್ರಮುಖ ಆರೋಪಿಯ ಕಾಲಿಗೆ ಹೆಣ್ಣೂರು ಪೊಲೀಸರು ಮಂಗಳವಾರ ಬೆಳಿಗ್ಗೆ ಗುಂಡಿಕ್ಕಿ ಬಂಧಿಸಿದ್ದಾರೆ.

- Advertisement -


ಪೊಲೀಸರ ಗುಂಡೇಟು ಬಲಗಾಲಿಗೆ ತಗುಲಿ ಗಾಯಗೊಂಡಿರುವ ಕೊಲೆ ಆರೋಪಿ ರಘು (30) ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.


ಕಳೆದ ನ.13ರಂದು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹಾಡಹಗಲೇ ಹೆಣ್ಣೂರಿನ ನಾಗವಾರದ ನಡುರಸ್ತೆಯಲ್ಲಿ ಗಾರ್ಮೆಂಟ್ಸ್ ಉದ್ಯಮಿ ಗ್ರಾಮಾಂತರ ಜಿಲ್ಲೆಯ ಮೂಲದ ಶ್ರೀಧರ್ ಎಂಬವರನ್ನು ರಘು ಸೇರಿ 6 ಮಂದಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು.

- Advertisement -


ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡು ರಘು ಮತ್ತವನ ಸಹಚರರಾದ ಮಹೇಶ್, ಹರೀಶ್, ಸುಜಿತ್ ನಾಯರ್, ಪ್ರಭು, ನೆಲ್ಸನ್, ಸೇರಿ 6 ಮಂದಿಯನ್ನು ಬಂಧಿಸಲಾಗಿತ್ತು.
ಕೊಲೆಗೆ ಬಳಸಿದ ಮಾರಾಕಾಸ್ತ್ರ ಜಪ್ತಿ ಮಾಡಲು ಬೆಳಿಗ್ಗೆ 6ರ ವೇಳೆ ಆರೋಪಿ ರಘುನನ್ನು ಕರೆತಂದುಕೊಂಡು ಕಸ್ತೂರಿನಗರದ ರೈಲ್ವೆ ಹಳಿ ಬಳಿ ಹೋಗಿದ್ದಾಗ ಪಿಎಸ್ ಐ ಲಿಂಗರಾಜ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.


ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ವಸಂತ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ಮತ್ತೆ ಹಲ್ಲೆ ಮಾಡಲು ಮುಂದಾಗಿದ್ದು ಇನ್ಸ್ ಪೆಕ್ಟರ್ ವಸಂತ್ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅದು ಬಲಗಾಲಿಗೆ ತಗುಲಿ ರಘು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು ಆತನನ್ನು ವಶಕ್ಕೆ ಪಡೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.


ರಘು ನಡೆಸಿದ ಹಲ್ಲೆಯಿಂದ ಗಾಯಗೊಂಡ ಪಿಎಸ್ ಐ ಲಿಂಗರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ರಘು ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ರಾಬರಿ ಯತ್ನ ಪ್ರಕರಣ ದಾಖಲಾಗಿದ್ದು ಸ್ನೇಹಿತನೇ ಆಗಿದ್ದ ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಜೊತೆಗೆ ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು.


ಆಕ್ರೋಶಗೊಂಡಿದ್ದ ಶ್ರೀಧರ್ ಕೊಲೆ ಮಾಡುವುದಾಗಿ ರಘುಗೆ ಬೆದರಿಕೆ ಹಾಕಿದ್ದು ಇದರಿಂದ ತನಗೆ ಉಳಿಗಾಲವಿಲ್ಲ ಎಂದು ತಿಳಿದು ಸಹಚರರ ಜೊತೆ ಸೇರಿ ಶ್ರೀಧರ್ ನನ್ನು ಕೊಲೆ ಮಾಡಿರುವುದಾಗಿ ರಘು ಬಾಯ್ಬಿಟ್ಟಿದ್ದಾನೆ ಎಂದು ಶರಣಪ್ಪ ತಿಳಿಸಿದರು.
ಕೊಲೆಯಾಗಿರುವ ಶ್ರೀಧರ್ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ರಾಬರಿ ಯತ್ನ ಪ್ರಕರಣ ದಾಖಲಾಗಿತ್ತು ಎಂದು ಹೇಳಿದರು.

Join Whatsapp