ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬ್ಯಾಗ್’ಗಳಲ್ಲಿ ಗಾಂಜಾ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸ್ವಿಗ್ಗಿ ಡೆಲಿವರಿ ಬ್ಯಾಗ್’ನಲ್ಲಿ ಗಾಂಜಾ ಸಾಗಾಟದ ಅನುಮಾನ ಬಂದ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ವೈಟ್ ಫೀಲ್ಡ್ ಮತ್ತು ಯಲಹಂಕದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಾಂಜಾ ಡೆಲಿವರಿ ಬ್ಯಾಗ್’ನಲ್ಲಿ ಸಾಗಾಟ ಮಾಡಿ ಮಾರಾಟ ಮಾಡುವ ಜಾಲ ಬಯಲಾಗಿದೆ.
ಬಂಧಿತರಿಬ್ಬರೂ ಬಿಹಾರದಿಂದ ಬೆಂಗಳೂರಿಗೆ ವಿವಿಧ ಬಗೆಯ ಡ್ರಗ್ಸ್ ತಂದು ಸ್ವಿಗ್ಗಿ ಡೆಲಿವರಿ ಬ್ಯಾಗ್’ಗಳಲ್ಲಿ ತುಂಬಿಕೊಂಡು ಅಪಾರ್ಟ್ ಮೆಂಟ್ ಗಳಲ್ಲಿ ನಡೆಯುವ ಪಾರ್ಟಿಗಳು, ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದರು ಎಂಬ ಕುರಿತು ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 10 ಲಕ್ಷ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.