ನವದೆಹಲಿ: ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಅಸಾದಿ ಗ್ರಾಮದ ದಲಿತ ಯುವಕ ಕೋಜಾರಾಮ್ ಮೇಘವಾಲ್ ಎಂಬವರ ಗುಂಫು ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಶಾಫಿ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಗುಂಪು ಹಲ್ಲೆ ಪ್ರಕರಣಗಳನ್ನು ನಿಭಾಯಿಸುವಲ್ಲಿನ ಸರ್ಕಾರದ ನಿರ್ಲಕ್ಷ್ಯವು ಇಂತಹ ಕೊಲೆಗಳಿಗೆ ಮತ್ತೆ ಮತ್ತೆ ಕಾರಣವಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳೂ ಹೊರತಾಗಿಲ್ಲ ಎಂದು ದೂರಿದ್ದಾರೆ.
ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ ಶಾಫಿ, ಅಪರಾಧಿಗಳ ವಿರುದ್ಧ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇತರ ರಾಜ್ಯಗಳಿಗೆ ಹೋಲಿಸಿದರೆ ಕಾಂಗ್ರೆಸ್ ಸರ್ಕಾರವಿರುವ ರಾಜಸ್ಥಾನದಲ್ಲಿ ಗುಂಪು ಹಲ್ಲೆ ಮತ್ತು ಗುಂಪು ಹಿಂಸಾಚಾರದ ಪರಿಣಾಮವಾಗಿ ನಡೆಯುತ್ತಿರುವ ಕೊಲೆಗಳ ಸಂಖ್ಯೆ ಹೆಚ್ಚಾಗಿದೆ. ದಲಿತರು, ಮುಸ್ಲಿಮರು ಮತ್ತು ಸಮಾಜದ ಇತರ ದುರ್ಬಲ ವರ್ಗಗಳ ಸದಸ್ಯರನ್ನು ಗುರಿಯಾಗಿ ನಡೆಯುತ್ತಿರುವ ಗುಂಪು ಹತ್ಯೆಯನ್ನು ತಡೆಯಲು ಹಾಗೂ ಇಂತಹ ಅಪರಾಧಿಗಳೊಂದಿಗೆ ಕಠಿಣ ರೀತಿಯಲ್ಲಿ ವ್ಯವಹರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇಂತಹ ವಿಷಯಗಳಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಈ ವರ್ಗಗಳ ಹತ್ಯೆಗಳಿಗೆ ನೇರ ಕಾರಣವಾಗುತ್ತಿದೆ ಎಂದು ಅವರು ಆರೋಪಿಸಿದರು.
ದುಷ್ಕರ್ಮಿಗಳು ಮರದ ದೊಣ್ಣೆ, ಮತ್ತಿತರ ಮಾರಕಾಸ್ತ್ರಗಳಿಂದ ಹೊಡೆದ ಪರಿಣಾಮವಾಗಿ 40 ವರ್ಷದ ಮೇಘವಾಲ್ ಅವರು ಸಾವನ್ನಪ್ಪಿದ್ದಾರೆ. ಇದು ಗುಂಪು ಹತ್ಯೆಯ ಇತ್ತೀಚಿನ ಉದಾಹರಣೆಯಾಗಿದೆ. ಮುಸ್ಲಿಂ ಯುವಕರ ಗುಂಪು ಹತ್ಯೆಯ ಪ್ರಕರಣಗಳಲ್ಲಿ ಸರ್ಕಾರ ಕಠಿಣ ಮತ್ತು ಸೂಕ್ತ ಕ್ರಮ ಕೈಗೊಂಡಿದ್ದರೆ, ಬಡ ದಲಿತ ವ್ಯಕ್ತಿಯ ಹತ್ಯೆ ನಡೆಯುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಆದ್ದರಿಂದ ಪ್ರಕರಣದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ಸೂಕ್ತ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ನೀಡಬೇಕು ಎಂದು ಶಾಫಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.