ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಗಾಂಧಿ ಪ್ರತಿಮೆ ಅನಾವರಣ

Prasthutha|

ನ್ಯೂಯಾರ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಳ್ಳುವುದರೊಂದಿಗೆ ಇದರ ಪ್ರಧಾನ ಕಚೇರಿಯಲ್ಲಿ ಮಹಾತ್ಮಾ ಗಾಂಧಿಯವರ ಅರ್ಧ ಉದ್ದದ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಮಾಹಿತಿ ನೀಡಿದ್ದಾರೆ.

- Advertisement -


ಭಾರತದಿಂದ ಉಡುಗೊರೆಯಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ವಿಶಾಲವಾದ ಉತ್ತರ ಲಾನ್‌ನಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ. ಡಿಸೆಂಬರ್ 14 ರಂದು ಪ್ರತಿಮೆ ಅನಾವರಣಗೊಳ್ಳಲಿದ್ದು, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.


ವಿಶ್ವದ ವಿವಿಧ ಕಡೆಗಳಿಂದ ಇತರರ ಶಿಲ್ಪಗಳನ್ನು UN ಪ್ರಧಾನ ಕಛೇರಿಯಲ್ಲಿ ಸ್ಥಾಪಿಸಲಾಗಿದೆ. ಆದರೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಗಾಂಧಿ ಪ್ರತಿಮೆಯನ್ನು ಸ್ಥಾಪಿಸುತ್ತಿರುವುದು ಇದೇ ಮೊದಲು. ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ ಅಧ್ಯಕ್ಷ ಸ್ಥಾನವನ್ನು ಭಾರತವು ವಹಿಸಿಕೊಳ್ಳುವ ಭಾಗವಾಗಿ, ಎಸ್. ಜೈಶಂಕರ್ ಅವರು ಮುಂದಿನ ತಿಂಗಳು ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ.

- Advertisement -


ಗುಜರಾತಿನ ಏಕತಾ ಪ್ರತಿಮೆಯ ನಿರ್ಮಾರ್ತೃ ಪದ್ಮಶ್ರೀ ಪುರಸ್ಕೃತ ಖ್ಯಾತ ಭಾರತೀಯ ಶಿಲ್ಪಿ ರಾಮ್ ಸುತಾರ್ ಗಾಂಧಿ ಪ್ರತಿಮೆಯ ತಯಾರಕರಾಗಿದ್ದಾರೆ.


ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್, UN ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಡಿಸೆಂಬರ್ 14 ರಂದು ನಡೆಯಲಿರುವ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಭದ್ರತಾ ಮಂಡಳಿಯು ಜನವರಿ 1, 2023 ರಿಂದ ಹೊಸದಾಗಿ ನೇಮಕಗೊಳ್ಳಲಿರುವ ಐದು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.


ಯುಎನ್ ಜನರಲ್ ಅಸೆಂಬ್ಲಿಯ 77 ನೇ ಅಧಿವೇಶನದ ಅಧ್ಯಕ್ಷ ಸಿಸಾಬಾ ಕೊರೊಸಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Join Whatsapp