ಗಾಂಧಿ ತತ್ವಗಳಿಗೆ ತಿಲಾಂಜಲಿ : ಭಾವಚಿತ್ರಕ್ಕೆ ಪುಷ್ಪಾಂಜಲಿ

Prasthutha|

- Advertisement -

✍️ ಎಫ್.ನುಸೈಬಾ ಕಲ್ಲಡ್ಕ

ದೇಶವನ್ನು ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಗಾಂಧೀಜಿಯ ಜನ್ಮದಿನವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಅವರ ಭಾವಚಿತ್ರಗಳು ಹೂಹಾರಗಳಿಂದ ಅಲಂಕ್ರತಗೊಂಡು ರಾರಾಜಿಸಲಿದೆ. ಜೊತೆಗೆ ಒಂದಿಷ್ಟು ಸಭೆ ಸಮಾರಂಭಗಳು ,ಶ್ರಮದಾನಗಳು, ಸ್ವಚ್ಛ ಭಾರತದ ಅಭಿಯಾನಗಳು ನಡೆದು ದಿನದ ಸಮಾಪ್ತಿಯಾಗಲಿದೆ. ಆದರೆ ಇವೆಲ್ಲದರ ಮಧ್ಯೆ ಗಾಂಧಿ ಕನಸು ಕಂಡ ಜಾತ್ಯತೀತ ಭಾರತದ ಪರಿಕಲ್ಪನೆ ಮಾತ್ರ ಅಧೋಗತಿಗೆ ತಲುಪಿರುವುದನ್ನು ಒಪ್ಪಿಕೊಳ್ಳಲೇಬೇಕಿದೆ.

- Advertisement -


ಹೌದು, ಗಾಂಧಿಯ ಭಾರತವಿಂದು ಗೋಡ್ಸೆಯ ಭಾರತವಾಗಿ ಬದಲಾಗುತ್ತಿದೆ. ಗಾಂಧಿ ಕನಸಿನ ರಾಮರಾಜ್ಯ ಗೋಡ್ಸೆ ಪರಿವಾರದ ದ್ವೇಷ ರಾಜಕಾರಣದಲ್ಲಿ ಸರ್ವನಾಶವಾಗುತ್ತಿದೆ.ಗಾಂಧಿ ಪ್ರತಿಪಾದಿಸಿದ್ದ ಬಹುತ್ವ, ಸಾರ್ವಭೌಮತೆ, ಸಹೋದರತೆ, ಅಹಿಂಸೆಯ ಧ್ಯೇಯಗಳು ಬ್ರಿಟೀಷರ ಅಡಿಯಾಳು ಸಾವರ್ಕರ್ ರ ಹಿಂದುತ್ವದ ಪರಿಕಲ್ಪನೆಯಲ್ಲಿ ಕುಸಿದು ಹೋಗುತ್ತಿದೆ.
ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳ ಕುರಿತಾದ ಗಾಂಧಿಯ ವಿಚಾರಧಾರೆಗಳಿಗೆ ತದ್ವಿರುದ್ಧವಾದ ನೀತಿ ನಿಯಮಗಳು ಪ್ರಸ್ತುತ ದಿನಗಳಲ್ಲಿ ರೂಪುಗೊಳ್ಳುತ್ತಿದೆ.
ಗಾಂಧಿಯ ಆರ್ಥಿಕ ಚಿಂತನೆಯು ಸಮಗ್ರವಾಗಿತ್ತು ಮತ್ತು ಸಮಾಜದ ಸಾಮಾಜಿಕ, ಆರ್ಥಿಕ ಪುನರ್ ನಿರ್ಮಾಣದ ಗುರಿಯನ್ನು ಹೊಂದಿತ್ತು.ಹಣವು ಕೇವಲ ಶ್ರೀಮಂತರ ಕೈಯಲ್ಲಿ ಕೇಂದ್ರೀಕೃತವಾಗದೆ ಬಡವರಿಗೂ ಲಭ್ಯವಾಗಬೇಕೆಂದು ಬಯಸಿದ್ದರು.ಆರ್ಥಿಕ ಅಭಿವೃದ್ಧಿಗೆ ಸಾಮಾಜಿಕ ಒಳಹರಿವು ಅಗತ್ಯವಿದೆಯೆಂದು ಪ್ರತಿಪಾದಿಸಿದ್ದರು.


ಆದರೆ ಪ್ರಸ್ತುತ ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ಎಂಬ ಅತ್ಯಂತ ಕಳಪೆ ಆರ್ಥಿಕ ನೀತಿಯಿಂದ ದೇಶದ ಆರ್ಥಿಕತೆಯು ಮಕಾಡೆ ಮಲಗಿದೆ.ಕಪ್ಪು ಹಣದ ನಿರ್ಮೂಲನೆ ,ನಕಲಿ ನೋಟುಗಳಿಗೆ ಕಡಿವಾಣ ಸರ್ಕಾರದ ಘೋಷಣೆಯಾಗಿತ್ತು. ಆದರೆ ಇದರಿಂದ ಕಪ್ಪು ಹಣದ ಮೇಲೆ ಯಾವ ಪರಿಣಾಮವೂ ಬೀರಲಿಲ್ಲ.ನಕಲಿ ನೋಟಿನ ಪ್ರಮಾಣ ಶೇ 56ರಷ್ಟು ಹೆಚ್ಚಿದೆ ಎನ್ನುತ್ತದೆ ವರದಿಗಳು.ಅಷ್ಟೇ ಅಲ್ಲದೆ ನೋಟು ನಿಷೇಧದಿಂದ ಬೀದಿ ಬದಿ ವ್ಯಾಪಾರಿಗಳು ಅಕ್ಷರಶಃ ಬೀದಿಗೆ ಬಿದ್ದರು.ಸಣ್ಣ ಕೈಗಾರಿಕೆಗಳು, ಕಾರ್ಖಾನೆಗಳು ಮುಚ್ಚಿ ಹೋದವು.ನಿರುದ್ಯೋಗಿಗಳ ಸಂಖ್ಯೆಯೂ ಹೆಚ್ಚಾಯಿತು.
ನಿರುದ್ಯೋಗ ಕಾರಣ ಅನೇಕ ಉದ್ಯಮಿಗಳು ಆತ್ಮಹತ್ಯೆಗೆ ಶರಣಾದರು.2020 ರಲ್ಲಿ 11716 ಆತ್ಮಹತ್ಯೆಗೆ ಶರಣಾದರು ಎನ್ನುತ್ತದೆ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ. ಆತ್ಮಹತ್ಯೆಗಳಿಂದ ಓರ್ವ ಉದ್ಯಮಿ ಮಾತ್ರವಲ್ಲದೆ ಆತನ ಅಧೀನದಲ್ಲಿ ಕಾರ್ಯ ನಿರ್ವಹಿಸುವ ನೂರಾರು ಕುಟುಂಬಗಳು ಬೀದಿಗೆ ಬೀಳುತ್ತದೆ ಎಂಬುವುದು ವಾಸ್ತವ. 2020 ರಲ್ಲಿ ಭಾರತವನ್ನು ಬಡ ರಾಷ್ಟ್ರಗಳ ಪಟ್ಟಿಯಲ್ಲಿ ಹೆಸರಿಸಲಾಗಿದೆ.ಇಲ್ಲಿ ಅಭಿವೃದ್ಧಿ ಹೊಂದಿದ್ದು ಮೋದಿ ಕ್ರಪಾಪೋಷಿತ ಅದಾನಿ ,ಅಂಬಾನಿಗಳು ಮಾತ್ರ. ಇಲ್ಲಿನ ಸಾಮಾನ್ಯ ನಾಗರಿಕರು ನೆತ್ತರು ಹರಿಸಿ ಗಳಿಸಿದ ಸಾರ್ವಜನಿಕ ಸೊತ್ತುಗಳು, ರೈಲ್ವೆ, ವಿಮಾನ ನಿಲ್ದಾಣ, ರಸ್ತೆ, ಬ್ಯಾಂಕುಗಳನ್ನು ಕಾರ್ಪೊರೇಟರ್ ಗಳ ಪಾದ ಬುಡಕ್ಕೆ ಸಮರ್ಪಿಸಲಾಗಿದೆ.


ಇದಲ್ಲದೆ ಶಿಕ್ಷಣವನ್ನು ಕೇಸರೀಕರಣಗೊಳಿಸಿ ,ಬಡವರ ಪಾಲಿಗೆ ಗಗನ ಕುಸುಮವಾಗಿಸುವ NEP… ಬಹುತ್ವ ಸಂಸ್ಕೃತಿಗೆ ಮಾರಕವಾಗುವ UCC…ದೇಶದ ಮೂಲನಿವಾಸಿಗಳನ್ನು ತಾಯ್ನೆಲದಿಂದ ಮೂಲೋತ್ಪಾಟನೆಗೈಯ್ಯುವ NRC… ಓರ್ವ ಆದಿವಾಸಿ ವಿಧವೆ ಮಹಿಳೆ ಎಂಬ ಕಾರಣಕ್ಕಾಗಿ ನೂತನ ಸಂಸತ್ ಪ್ರವೇಶಕ್ಕೆ ಅವಕಾಶ ಸಿಗದ ಈ ದೇಶದ ರಾಷ್ಟ್ರಪತಿ… ಘನತೆವೆತ್ತ ಸಂಸತ್ತಿನಲ್ಲಿ ಮುಸ್ಲಿಂ ಸಮುದಾಯದ ದಾನಿಶ್ ಅಲಿಯನ್ನು ಬಿಜೆಪಿ ಸಂಸದ ರಮೇಶ್ ಬಿದೂರಿ ಅತ್ಯಂತ ಹೀನ ಪದಗಳಿಂದ ನಿಂದಿಸಿ ಅವಮಾನಿಸಿದ ರೀತಿ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸದ ಆಡಳಿತ ವ್ಯವಸ್ಥೆ……
ಇವೆಲ್ಲವೂ ಗಾಂಧಿ ಕನಸಿನ ಸುಂದರ ಭಾರತವನ್ನು ಡೋಲಾಯಮಾನವಾಗಿಸಿದೆ.


ಸ್ವಾತಂತ್ರ್ಯಾ ನಂತರ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಬಿಡದೆ ಒಂದು ಜಾತ್ಯಾತೀತ, ಸಂವಿಧಾನ ಬದ್ಧ ರಾಷ್ಟ್ರವಾಗಿ ಪುನರ್ ನಿರ್ಮಿಸಲು ಗಾಂಧಿಯು ಪಣತೊಟ್ಟಿದ್ದು ಗೋಡ್ಸೆ, ಸಾವರ್ಕರ್ ಆದಿಯಾಗಿ ಹಿಂದುತ್ವವಾದಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಇದರ ಪರಿಣಾಮವೇ ಗೋಡ್ಸೆಯು ಗಾಂಧಿ ಹಂತಕನಾಗಿ ಇಂದು ಗುರುತಿಸಲ್ಪಡುತ್ತಿರುವುದು.
ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟೀಷರ ವಿರುದ್ಧ ನೇತಾಜಿಯವರು ಯುದ್ಧ ಸಾರಿದಾಗ ” ಹಿಂದೂಗಳು ಯಾರೂ ನೇತಾಜಿಯ ಸೈನ್ಯ ಸೇರಬಾರದು, ಬ್ರಿಟೀಷರ ಸೈನ್ಯ ಸೇರಬೇಕು “ಎಂದು ಬಹಿರಂಗವಾಗಿ ಕರೆಕೊಟ್ಟು ಆರು ತಿಂಗಳಲ್ಲಿ ಒಂದು ಲಕ್ಷದಷ್ಟು ಮಂದಿಯನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸಿದ ಕೀರ್ತಿ ಹೊತ್ತಿರುವ ವಿ.ಡಿ.ಸಾವರ್ಕರ್ ನನ್ನು ಆರಾಧಿಸುವ , ಗಾಂಧಿ ಭಾವಚಿತ್ರಕ್ಕೆ ಗುಂಡೇಟು ಹೊಡೆದು ಸಂಭ್ರಮಿಸುವ ಮನಸ್ಥಿತಿ ಇರುವವರೆಗೂ ಗಾಂಧಿಯ ತತ್ವ ಸಿದ್ಧಾಂತಗಳು ಈ ದೇಶದಲ್ಲಿ ನೆಲೆಯೂರಲು ಹೇಗೆ ಸಾಧ್ಯ?
ದೇಶವು ಹೊತ್ತಿ ಉರಿಯುತ್ತಿದ್ದರೂ , ಮಹಿಳೆಯರ ನಗ್ನ ಮೆರವಣಿಗೆ ನಡೆದರೂ ಸೊಲ್ಲೆತ್ತದೆ ಕೇವಲ ಅಧಿಕಾರ ಲಾಲಸೆಯಿಂದ ಮಸೀದಿ ಮಂದಿರಗಳತ್ತ ಮುಖಮಾಡಿ , ಬ್ರಿಟಿಷರು ಅನುಸರಿಸಿದ ಒಡೆದು ಆಳುವ ನೀತಿಯನ್ನು ಅನುಕರಿಸುತ್ತಿರುವ ಪ್ರಸ್ತುತ ಪ್ರಭುತ್ವದ ಗಾಂಧಿ ಪ್ರೇಮ ಬರಿಯ ಬೂಟಾಟಿಕೆ ಅಲ್ಲದೆ ಇನ್ನೇನು ??
ಗಾಂಧಿಯ ಪರಿಕಲ್ಪನೆಯ ಸ್ವತಂತ್ರ , ಜಾತ್ಯಾತೀತ ಸಾಂವಿಧಾನಿಕ ಭಾರತವನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ಪ್ರಜೆಯೂ ಪಣತೊಡುವ ಮೂಲಕ ಗಾಂಧಿ ಜಯಂತಿಯ ಆಚರಣೆಯನ್ನು ಅರ್ಥಪೂರ್ಣಗೊಳಿಸಬೇಕು.

Join Whatsapp