ರೈಲುಗಳನ್ನು ಗದಗ ಜಂಕ್ಷನ್ ಬದಲಿಗೆ ಗದಗ ಬೈಪಾಸ್ ಮುಖಾಂತರ ಓಡಿಸುವುದು ಯಾವುದೇ ಮುಂದಾಲೋಚನೆ ಇಲ್ಲದ ತೀರ್ಮಾನ: ಅಪ್ಸರ್ ಕೊಡ್ಲಿಪೇಟೆ

Prasthutha|

ಗದಗ: ರೈಲುಗಳನ್ನು ಗದಗ ಜಂಕ್ಷನ್ ಬದಲಿಗೆ ಗದಗ ಬೈಪಾಸ್ ಮುಖಾಂತರ ಓಡಿಸುವ ತೀರ್ಮಾನ ಯಾವುದೇ ಮುಂದಾಲೋಚನೆ ಇಲ್ಲದ ತೀರ್ಮಾನ ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗದಗ ಜಿಲ್ಲೆಯ ಹಸಿವು ಮತ್ತು ಭಯ ಮುಕ್ತ ಚಳುವಳಿಯಾಗಿರುವ ಎಸ್ಡಿಪಿಐ ಪಕ್ಷದ 2024-27 ಅವಧಿಗೆ ನಡೆದ ಆಂತರಿಕ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಬ್ರಾಂಚ್ ಪದಾಧಿಕಾರಿಗಳು ಮತ್ತು ವಿಧಾನಸಭಾ ಕ್ಷೇತ್ರ ಸಮಿತಿಗಳ ಸದಸ್ಯರುಗಳ ನಾಯಕರುಗಳ ಸಭೆಯು ಪಕ್ಷದ ಕಛೇರಿಯಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಪ್ಸರ್ ಕೊಡ್ಲಿಪೇಟೆ ಯವರು ಪರಿಣಾಮಕಾರಿ ನಾಯಕತ್ವ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಪರ್ಯಾಯ ರಾಜಕಾರಣದ ಅಗತ್ಯತೆ ಬಗ್ಗೆ ತರಬೇತಿ ನೀಡಿ ನಾಯಕರುಗಳೊಂದಿಗೆ ಸಂವಾದ ನಡೆಸಿದರು.

- Advertisement -


ನಂತರ ನಡೆದ ವಿಶೇಷ ಜಿಲ್ಲಾ ಸಮಿತಿ ಸಭೆಯಲ್ಲಿ ಪಕ್ಷದ ಆಂತರಿಕ ಚುನಾವಣೆಯ ಅವಲೋಕನ ನಡೆಸಿ ನೂತನವಾಗಿ ಆಯ್ಕೆಯಾಗಿರುವ ನಾಯಕರುಗಳು ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು. ಸಭೆಯಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.


ಪ್ರಾಸ್ತಾವಿಕವಾಗಿ ಮಾತನಾಡಿದ ಅಪ್ಸರ್ ಕೊಡ್ಲಿಪೇಟೆ ಯವರು ಹುಬ್ಬಳ್ಳಿ- ವಿಜಯಪುರ Exp & ಹುಬ್ಬಳ್ಳಿ – ಸೊಲ್ಲಾಪುರ Exp ರೈಲುಗಳನ್ನು ಗದಗ ಜಂಕ್ಷನ್ ಬದಲಿಗೆ ಗದಗ ಬೈಪಾಸ್ ಮುಖಾಂತರ ಓಡಿಸುವ ತೀರ್ಮಾನ ಯಾವುದೇ ಮುಂದಾಲೋಚನೆ ಇಲ್ಲದ ತೀರ್ಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.


ವಿಜಯಪುರ-ಹುಬ್ಬಳ್ಳಿ ಮಾರ್ಗದ ರೈಲುಗಳು ಗದಗ ಜಂಕ್ಷನ್ಗೆ ಬಂದು ಇಂಜಿನ್ ಬದಲಾಯಿಸಿ ಹೊರಡಲು 0 ರಿಂದ 15 ನಿಮಿಷ ಬೇಕಾಗುತ್ತದೆ. ಈ ಸಮಯ ಕಡಿಮೆ ಮಾಡಲು ಗದಗ ಬೈಪಾಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಆದರೆ ಈಗ ವಿಶೇಷ ರೈಲುಗಳನ್ನು ಬೈಪಾಸ್ ನಿಲ್ದಾಣದ ಮೂಲಕ ಸಂಚಾರ ನಡೆಸುವಂತೆ ಮಾಡಿ ಜಂಕ್ಷನ್ಗೆ ರೈಲು ಬರದಂತೆ ಮಾಡಲಾಗುತ್ತಿರುವುದು ಸರಿಯಲ್ಲ.
ಕೊಪ್ಪಳ, ವಿಜಯನಗರ, ಬಳ್ಳಾರಿ ಭಾಗದ ಜನರು ಗದಗ ಜಂಕ್ಷನ್ನಲ್ಲಿ ಇಳಿದು ರೈಲು ಬದಲಾವಣೆ ಮಾಡುತ್ತಿದ್ದರು. ಈಗ ರೈಲು ಗದಗ ಬೈಪಾಸ್ನಲ್ಲಿ ನಿಂತರೆ ಅಲ್ಲಿಂದ 200 ರೂ. ಆಟೋ ಬಾಡಿಗೆ ಪಾವತಿ ಮಾಡಿ ಮತ್ತೆ ಗದಗ ಜಂಕ್ಷನ್ಗೆ ಆಗಮಿಸಬೇಕು. ಬೈಪಾಸ್ಗೆ ರೈಲು ಸ್ಥಳಾಂತರ ಯಾವುದೇ ಮುಂದಾಲೋಚನೆ ಇಲ್ಲದ ತೀರ್ಮಾನ ಎಂದು ಅಪ್ಸರ್ ಕೊಡ್ಲಿಪೇಟೆ ಆರೋಪಿಸಿದರು.

ಮುಂದುವರಿದು ಮಾತನಾಡಿದ ಅವರು ಅಮೃತ್ ಭಾರತ್ ಯೋಜನೆಯಡಿ 23.05 ಕೋಟಿ ರೂ. ವೆಚ್ಚದಲ್ಲಿ ಗದಗ ರೈಲು ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿಯೇ ನಗರದಿಂದ 10 ಕಿ. ಮೀ. ದೂರದಲ್ಲಿರುವ ಬೈಪಾಸ್ ನಿಲ್ದಾಣಕ್ಕೆ ರೈಲುಗಳನ್ನು ಸ್ಥಳಾಂತರ ಮಾಡುತಿರುವುದು ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರು ಅದರಲ್ಲೂ ಗದಗದ ಜನರಿಗೆ ರೈಲ್ವೆ ಇಲಾಖೆ ಮಾಡುತಿರುವ ಅನ್ಯಾಯವಾಗಿದೆ. ಗದಗ ಜಂಕ್ಷನ್ಗೆ ರೈಲು ಬರಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.


ಗದಗ ಜಿಲ್ಲಾ ನಾಯಕರು ಈ ಬಗ್ಗೆ ಪಕ್ಷದ ವತಿಯಿಂದ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಜನರ ಪರವಾಗಿ ಮನವಿ ಸಲ್ಲಿಸಲು ಸಲಹೆ ನೀಡಿದರು.

ಈ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು ಬಿಲಾಲ್ ಗೋಕಾವಿ, ಉಪಾಧ್ಯಕ್ಷರಾದ ಹಿದಾಯತುಲ್ಲಾ ಕಾಗದಗಾರ, ಕಾರ್ಯದರ್ಶಿಗಳಾದ ಇರ್ಫಾನ್ ಗುಳಗುಂದಿ, ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಗೇವಾಡಿ, ಗದಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಮೊಹಮ್ಮದ್ ಅಫ್ಫಾನ್ ಉಪಾಧ್ಯಕ್ಷರಾದ ಮುಸ್ತಾಕ್ ಹೊಸಮನಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಇಸ್ಮಾಯಿಲ್ ನದಾಫ್, ಉಪಾಧ್ಯಕ್ಷರಾದ ಮುಝಮ್ಮಿಲ್ ಮತ್ತು ಸದಸ್ಯರು ಉಪಸ್ಥಿತರಿದ್ದರು.



Join Whatsapp