10 ವರ್ಷದ ಹುಡುಗನಿಗೆ ಪೂರ್ತಿ ಟಿಕೆಟ್‌: KSRTC ಕಂಡಕ್ಟರ್‌ಗೆ ದಂಡ

Prasthutha|

ಮುಧೋಳ: 12 ವರ್ಷದೊಳಗಿನ ಬಾಲಕನಿಗೆ ಪೂರ್ಣ ಟಿಕೆಟ್‌ ಪಡೆದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದು, ಕೆಎಸ್‌ಆರ್‌ಟಿಸಿ ಕಂಡಕ್ಟರ್‌ಗೆ ಹೆಚ್ಚುವರಿಯಾಗಿ ಶೇಕಡಾ 9ರಷ್ಟು ಬಡ್ಡಿಯೊಂದಿಗೆ ಎರಡು ತಿಂಗಳಲ್ಲಿ ಪಾವತಿ ಮಾಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

- Advertisement -

ಸಾಮಾನ್ಯವಾಗಿ ಕೆಎಸ್‌ಅರ್‌ಟಿಸಿ ಬಸ್‌ ಸೇರಿದಂತೆ ಇನ್ನಿತರೆ ಬಸ್‌ಗಳಲ್ಲೂ ಸಹ 12 ವರ್ಷ ಮೆಲ್ಪಟ್ಟ ಮಕ್ಕಳಿಗೆ ಮಾತ್ರ ಫುಲ್‌ ಟಿಕೆಟ್‌ ಹಣ ಪಡೆಯಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಅನಂತಪುರ ಗ್ರಾಮದ ನಿವಾಸಿ ದೀಪಾ ಹಿರೇಮಠ ಅವರು ಪುತ್ರನೊಂದಿಗೆ ಕಳೆದ ವರ್ಷ ಜುಲೈ 1ರಂದು ಮುಧೋಳದಿಂದ ವಿಜಯಪುರಕ್ಕೆ ಹೊರಟಿದ್ದರು. ಪುತ್ರನಿಗೆ 10 ವರ್ಷ 11 ತಿಂಗಳು ಆಗಿದ್ದು, ಅರ್ಧ ಟಿಕೆಟ್‌ ನೀಡಿ ಎಂದು ದೀಪಾ ಎನ್ನುವವರು ಕಂಡಕ್ಟರ್‌ಗೆ ಕೇಳಿದರು. ಆದರೆ 12 ವರ್ಷ ಮೇಲ್ಪಟ್ಟಿದ್ದಾನೆ, ಪೂರ್ಣ ಟಿಕೆಟ್‌ ಪಡೆಯಬೇಕು ಎಂದು ಕಂಡಕ್ಟರ್‌ ಕೇಳಿದ್ದರು. ಈ ವೇಳೆ ಜನ್ಮ ದಾಖಲೆಯ ಆಧಾರ್‌ ಕಾರ್ಡ್‌ ತೋರಿಸಿದರೂ ಒಪ್ಪದ ಅವರು, ಬಸ್‌ನಿಂದ ಕೆಳಗೆ ಇಳಿಯಿರಿ ಎಂದರು. ಆಗ ಅವರು ಯಾವುದೇ ದಾರಿಯಿಲ್ಲದೆ ಪೂರ್ಣ ಟಿಕೆಟ್ ಪಡೆದೇ ಪ್ರಯಾಣ ಮಾಡಿದರು. ಬಳಿಕ ಈ ವಿಚಾರವನ್ನು ಡಿಪೋ ವ್ಯವಸ್ಥಾಪಕರ ಗಮನಕ್ಕೆ ತಂದು, ಕಂಡಕ್ಟರ್‌ ವಿರುದ್ಧ ಕ್ರಮ ಕೈಗೊಂಡು, ಟಿಕೆಟ್‌ ಹಣ ವಾಪಸ್‌ ಕೊಡಬೇಕೆಂದು ಕೋರಿದರು. ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ವಕೀಲರಿಂದ ನೋಟಿಸ್‌ ಕಳುಹಿಸಿದರೂ ಸ್ಪಂದಿಸದ ಹಿನ್ನೆಲೆ ಆಯೋಗಕ್ಕೆ ದೂರು ಸಲ್ಲಿಸಿದರು. ಕೆಎಸ್‌ಆರ್‌ಟಿಸಿ ನಿಯಾಮಾವಳಿ ಉಲ್ಲಂಘಿಸಿ ಪೂರ್ಣ ಟಿಕೆಟ್‌ ಕೊಟ್ಟು ಸೇವಾ ನ್ಯೂನ್ಯತೆ ಮತ್ತು ಅನುಚಿತ ವ್ಯಾಪಾರ ಮಾಡಿದ್ದು ಸಾಬೀತಾಗಿದೆ. ದೂರುದಾರರಿಂದ ಹೆಚ್ಚುವರಿಯಾಗಿ ಪಡೆದ 50 ರೂಪಾಯಿ ಅನ್ನು ಬಡ್ಡಿ ಸಮೇತ ನೀಡಬೇಕು. ಜೊತೆಗೆ ಮಾನಸಿಕ ಹಿಂಸೆ ಅನುಭವಿಸಿರುವುದರಿಂದ ವಿಶೇಷ ಪರಿಹಾರವಾಗಿ 2 ಸಾವಿರ ರೂಪಾಯಿ, ಪ್ರಕರಣದ ವೆಚ್ಚಕ್ಕಾಗಿ 1 ಸಾವಿರ ರೂಪಾಯಿ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಡಿ.ವೈ.ಬಸಾಪುರ, ಸದಸ್ಯರಾದ ಸಿ.ಎಚ್‌.ಸಮಿಉನ್ನಿಸಾ ಅಬ್ರಾರ್‌, ಕಮಲಕಿಶೋರ್‌ ಅವರನ್ನೊಳಗೊಂಡ ಪೀಠ ಆದೇಶಿಸಿದೆ ಎಂದು ಪ್ರಜಾವಾಣಿಯಲ್ಲಿ ವರದಿಯಾಗಿದೆ.

Join Whatsapp