ಬೆಂಗಳೂರು: ರೈತರ ಜೀವನಾಡಿ, ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬಾಗಿನ ಅರ್ಪಿಸಲಿದ್ದಾರೆ.
ಬೆಳಗ್ಗೆ 10.30ಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಆರ್‌ಎಸ್‌ನಲ್ಲಿರುವ ಕಾವೇರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಳಗ್ಗೆ 11 ಗಂಟೆಗೆ ಬಾಗಿನ ಅರ್ಪಿಸಲಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿ ಒಂದು ಬಾರಿ ಸೇರಿದಂತೆ 3ನೇ ಬಾರಿಗೆ ಕಾವೇರಿಗೆ ಬಾಗಿನ ಅರ್ಪಿಸಲಿದ್ದಾರೆ. ಡಿಸಿಎಂ ಶಿವಕುಮಾರ್ ಮತ್ತಿತರು ಜೊತೆಗಿರಲಿದ್ದಾರೆ.
ಕಳೆದ ವರ್ಷ ಭೀಕರ ಬರಗಾಲ ಎದುರಾದ ಕಾರಣ ಕೃಷ್ಣರಾಜಸಾಗರ ಜಲಾಶಯದ ಭರ್ತಿಯಾಗದ ಕಾರಣ ಬಾಗಿನ ಅರ್ಪಿಸಲು ಸಾಧ್ಯವಾಗಿರಲಿಲ್ಲ. 2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯ ಅವರಿಗೆ ಆಗಲೂ ಬಾಗಿನ ಅರ್ಪಿಸುವ ಭಾಗ್ಯ ಒದಗಿ ಬಂದಿರಲಿಲ್ಲ. 2014ರಲ್ಲಿ 123 ಅಡಿಗೆ ತಲುಪಿದ್ದ ಕೃಷ್ಣರಾಜಸಾಗರ ಭರ್ತಿಯಾಗಲಿಲ್ಲ. ಕೃಷ್ಣರಾಜಸಾಗರ ಜಲಾಶಯ ತುಂಬದ ಹಿನ್ನೆಲೆಯಲ್ಲಿ 2015, 16, 17ರಲ್ಲೂ ಬಾಗಿನ ಅರ್ಪಿಸಲು ಸಿದ್ದರಾಮಯ್ಯನವರಿಗೆ ಸಾಧ್ಯವಾಗಲಿಲ್ಲ.