ಸರ್ಕಾರಿ ಪದವಿಪೂರ್ವ, ಪದವಿ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪೂರ್ಣ ಶುಲ್ಕ ವಿನಾಯಿತಿ: ಬಿ.ಸಿ. ನಾಗೇಶ್

Prasthutha|

ಬೆಂಗಳೂರು: ಸರ್ವರ ಹಿತವನ್ನು ಕಾಯುವ, ದೂರದೃಷ್ಟಿಯ, ಸಮಗ್ರ ಅಭಿವೃದ್ಧಿಯ ಬಜೆಟ್‌ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದು, ಕೃಷಿ ಮತ್ತು ಶಿಕ್ಷಣ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಸಕಾಲ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ  ಬಿ.ಸಿ. ನಾಗೇಶ್ ತಿಳಿಸಿದರು.

- Advertisement -

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚುನಾವಣೆ ಹೊಸ್ತಿಲಲ್ಲಿ ಮಂಡಿಸಲಾಗಿರುವ ಈ ಬಜೆಟ್‌’ನಲ್ಲಿ ರೈತರು, ಮಹಿಳೆಯರು, ಕಾರ್ಮಿಕರು, ಯುವಜನತೆ, ದುಡಿಯುವ ವರ್ಗ, ಶಿಕ್ಷಣ, ಉದ್ಯೋಗ, ಕೈಗಾರಿಕೆ, ಸಮಾಜ ಕಲ್ಯಾಣ, ವಸತಿ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಸಕಲ ಕ್ಷೇತ್ರಗಳ ಪರಿಪೂರ್ಣ ಅಭಿವೃದ್ಧಿಗೆ ಆದ್ಯತೆ, ಅನುದಾನವನ್ನು ನೀಡಲಾಗಿದೆ ಎಂದರು.

ಶಾಲಾ-ಕಾಲೇಜುಗಳಲ್ಲಿ 9,556 ಕೊಠಡಿಗಳ ನಿರ್ಮಾಣ, ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ ಚಾಲಕರು, ಆಟೋ ರಿಕ್ಷಾ ಚಾಲಕರು ಹಾಗೂ ಸಿಂಪಿಗರ (ಟೈಲರ್) ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಿರುವುದು ಸ್ವಾಗತಾರ್ಹ ಎಂದು ಸಚಿವರು ಹೇಳಿದರು.

- Advertisement -

ಸರ್ಕಾರಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ. ‘ಮಕ್ಕಳ ಬಸ್’ ಯೋಜನೆ, ಕನ್ನಡ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಪ್ರೋತ್ಸಾಹಿಸಲು ‘ಹಳ್ಳಿ ಮುತ್ತು’ ಯೋಜನೆ, ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಪೂರಕವಾಗಿ ‘ಪಿಎಂ ಶ್ರೀ’ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ., 60 ತಾಲೂಕುಗಳಲ್ಲಿ ವಿಜ್ಞಾನ ಶಿಕ್ಷಣಕ್ಕಾಗಿ ತಲಾ ಒಂದರಂತೆ ‘ಆದರ್ಶ ಪದವಿಪೂರ್ವ ಕಾಲೇಜು’ಗಳ ಅಭಿವೃದ್ಧಿ, 73 ಕರ್ನಾಟಕ ಪಬ್ಲಿಕ್ ಶಾಲೆಗಳು ಮತ್ತು 50 ಆದರ್ಶ ವಿದ್ಯಾಲಯಗಳಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ‘ಸೃಷ್ಟಿ ಟಿಂಕರಿಂಗ್’ ಪ್ರಯೋಗಾಲಯ ಸ್ಥಾಪನೆ, 23 ತಾಲೂಕುಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ ಮಾಡುವುದಾಗಿ ಬಜೆಟ್‌’ನಲ್ಲಿ ಘೋಷಿಸಲಾಗಿದೆ.

ವಿದ್ಯಾರ್ಥಿನಿಯರಿಗೆ 350 ಕೋಟಿ ರೂ. ವೆಚ್ಚದಲ್ಲಿ ಉಚಿತ ಬಸ್ ಪಾಸ್, ವಿದ್ಯಾರ್ಥಿಗಳಲ್ಲಿ ಓದಿನ ಹವ್ಯಾಸ ಬೆಳೆಸಲು 23,347 ಸರ್ಕಾರಿ ಶಾಲೆಗಳಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ರೀಡಿಂಗ್ ಕಾರ್ನರ್ ಸ್ಥಾಪನೆ, 10ನೇ ತರಗತಿಯಲ್ಲಿ ಉತ್ತಮ ಫಲಿತಾಂಶಕ್ಕೆ ಅಭ್ಯುದಯ ಕಾರ್ಯಕ್ರಮ, ಎಲ್ಲ ಶಾಲೆಗಳಲ್ಲೂ ಶೌಚಗೃಹಗಳ ನಿರ್ಮಾಣ ಸೇರಿದಂತೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಬಜೆಟ್‌ನಲ್ಲಿ ಗರಿಷ್ಠ ಆದ್ಯತೆ ನೀಡಲಾಗಿದೆ ಎಂದು ಸಚಿವ ನಾಗೇಶ್ ಅವರು ತಿಳಿಸಿದ್ದಾರೆ.



Join Whatsapp