ಇಂಧನ ಬೆಲೆ ಏರಿಕೆ: ರಾಜ್ಯಗಳನ್ನು ಟೀಕಿಸಿದ ಮೋದಿಗೆ ಕ್ಲಾಸ್

Prasthutha|

ಹೊಸದಿಲ್ಲಿ: ಇಂಧನದ ಮೇಲೆ ರಾಜ್ಯಗಳು ವಿಧಿಸಿದ ಮೌಲ್ಯವರ್ಧಿತ ತೆರಿಗೆಯನ್ನು ಇಳಿಕೆ ಮಾಡದ ಕ್ರಮವನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯಗಳು ತರಾಟೆಗೆ ತೆಗೆದುಕೊಂಡಿವೆ.

- Advertisement -

ಪ್ರಧಾನಿ ಮೋದಿಯವರ ಅವಿವೇಕವೇ ಈ ಬೆಲೆ ಏರಿಕೆಗೆ ಕಾರಣ ಎಂದ ರಾಜ್ಯಗಳು, ಕೇಂದ್ರ ಸರ್ಕಾರ ಹಲವು ತೆರಿಗೆ ಹಾಗೂ ಸೆಸ್ ಗಳನ್ನು ವಿಧಿಸಿ, ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದು ತಿರುಗೇಟು ನೀಡಿವೆ.

ರಾಜ್ಯಗಳು ಇಂಧನದ ಮೇಲೆ ವಿಧಿಸುವ ಮೌಲ್ಯವರ್ಧಿತ ತೆರಿಗೆಯನ್ನು ರಾಷ್ಟ್ರೀಯ ಹಿತಾಸಕ್ತಿಯ ಸಲುವಾಗಿ ಕಡಿತಗೊಳಿಸಬೇಕು ಎಂದು ಮೋದಿಯವರು ಕೋವಿಡ್-19 ಪರಿಸ್ಥಿತಿ ಮತ್ತು ಪುನಶ್ಚೇತನದ ಬಗೆಗೆ ಚರ್ಚಿಸಲು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ವಿಡಿಯೊ ಕಾನ್ಫರೆನ್ಸ್ ನಲ್ಲಿ ಆಗ್ರಹಿಸಿದ್ದರು.

- Advertisement -

ನವೆಂಬರ್ ನಿಂದ ಅಂದರೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೀಮಾ ಸುಂಕವನ್ನು ಇಳಿಸಿದರೂ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳು ವ್ಯಾಟ್ ಇಳಿಸಿಲ್ಲ ಎಂದು ಅಸಮಾಧಾನ ಸೂಚಿಸಿದ್ದರು. “ಮೋದಿ ಏಕಮುಖ ಭಾಷಣ ಮಾಡಿದ್ದಾರೆ.. ನಮಗೆ ಮುಖ್ಯಮಂತ್ರಿಗಳಿಗೆ ಪ್ರತಿ ಹೇಳಿಕೆ ನೀಡಲು ಅವಕಾಶ ಇರಲಿಲ್ಲ. ನಾವು ಕೇವಲ ಅವರನ್ನು ನೋಡುತ್ತಾ, ಕೇಳುತ್ತಾ ಇರಬೇಕಾಯಿತು. ಅವರ ವಾದವನ್ನು ನಾವು ಒಪ್ಪುವುದಿಲ್ಲ. ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಬೇಕು ಎಂದು ನಾವು ಆಗ್ರಹಿಸುತ್ತೇವೆ” ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯವರ ಕಚೇರಿ ಕೂಡಾ ಪ್ರಧಾನಿ ಹೇಳಿಕೆಯನ್ನು ಅಲ್ಲಗಳೆದಿದ್ದು, ಪೆಟ್ರೋಲ್- ಡೀಸೆಲ್ ಮಾರಾಟದಿಂದ ಕೇಂದ್ರ ಪಡೆಯುವ ತೆರಿಗೆ ಪ್ರಮಾಣದ ಅಂಕಿ ಅಂಶ ನೀಡಿ, ರಾಜ್ಯಗಳಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿದೆ ಎನ್ನುವುದು ಸರಿಯಲ್ಲ ಎಂದು ಹೇಳಿವೆ.

ಇಂಧನವನ್ನು ಕೂಡಾ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಡಿ ತರುವಂತೆ ಜಾರ್ಖಂಡ್ ಹಾಗೂ ಪಂಜಾಬ್ ಆಗ್ರಹಿಸಿವೆ.

ಬಿಜೆಪಿಯೇತರ ಪಕ್ಷಗಳ ವಶದಲ್ಲಿರುವ ರಾಜ್ಯಗಳನ್ನು ಮಾತ್ರ ಗುರಿಯಾಗಿಸಿ ತನ್ನ ಮೇಲಿನ ಅಪವಾಧವನ್ನು ಬೇರೆಯವರ ಮೇರೆ ಹೊರಿಸಲು ಯತ್ನಿಸಿದ ಬಗ್ಗೆ ವ್ಯಾಪಕ  ಆಕ್ರೋಶ ವ್ಯಕ್ತವಾಗಿದೆ

 ಕಾಂಗ್ರೆಸ್ ನಾಯಕ ಪವನ್ ಖೇರಾ ಮಾತನಾಡಿ, ‘ಕಳೆದ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸಿ ಕೇಂದ್ರವು 26 ಲಕ್ಷ ಕೋಟಿ ಗಳಿಸಿದೆ. ಇದನ್ನು ರಾಜ್ಯಗಳಿಗೆ ಹಂಚಿಕೊಳ್ಳಲಾಗಿದೆಯೇ’ ಎಂದು ಪ್ರಶ್ನಿಸಿದರು.

ಸಕಾಲದಲ್ಲಿ ರಾಜ್ಯಗಳ ಜಿಎಸ್ ಟಿ ಪಾವತಿಸಲಿಲ್ಲವೆಂದು ಪ್ರಧಾನಿಯವರು ವ್ಯಾಟ್ ತಗ್ಗಿಸಲು ಹೇಳುತ್ತಿದ್ದಾರೆ. ಹಾಗಾದರೆ ಮೋದಿಯವರು ಮೊದಲಿಗೆ ಅಬಕಾರಿ ಸುಂಕವನ್ನು ಇನ್ನಷ್ಟು ಕಡಿತಗೊಳಿಸಿ, ನಂತರ ವ್ಯಾಟ್ ಕಡಿಮೆಗೊಳಿಸಲು ಹೇಳಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ “ ಇಂಧನ ಬೆಲೆ ಏರಿಕೆ ಕುರಿತು ಕೇಂದ್ರವು ತನ್ನ ಕರ್ತವ್ಯದಿಂದ ನುಣುಚಿಕೊಳ್ಳುತ್ತಿದ್ದು, ಬಿಜೆಪಿ ಅಧಿಕಾರದಲ್ಲಿರುವ ಹರ್ಯಾಣದಲ್ಲಿ ಪೆಟ್ರೋಲ್ ,ಡೀಸೆಲ್ ಗಳ ಮೇಲೆ ಅತ್ಯಂತ ಹೆಚ್ಚು ವ್ಯಾಟ್ ಹೇರಲಾಗಿದೆ ಎಂದು ಹೇಳಿದರು.

Join Whatsapp