ಬೆಂಗಳೂರು: ಇಂಧನ ದರ ಹೆಚ್ಚಳವು ದೇಶ ವಿರೋಧಿ ಕ್ರಮ ಎಂದು ರಾಜ್ಯಸಭೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಪೆಟ್ರೋಲ್, ಡೀಸೆಲ್ ಮತ್ತು ಸೀಮೆಎಣ್ಣೆ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದು ದೇಶದಲ್ಲಿ ದಂಗೆಯಂಥ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಬೆಲೆ ಏರಿಕೆಯು ಹಣಕಾಸು ಸಚಿವಾಲಯದ ಬೌದ್ಧಿಕ ದಿವಾಳಿತನ. ಇದು ರಾಷ್ಟ್ರವಿರೋಧಿಯೂ ಹೌದು. ಬೆಲೆ ಏರಿಕೆ ಮೂಲಕ ಬಜೆಟ್ ಕೊರತೆಯನ್ನು ಸರಿದೂಗಿಸಿಕೊಳ್ಳುವುದು ಅಸಮರ್ಥತೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.