ಮಂಗಳೂರು: ಕೇರಳದ ಕಣ್ಣೂರಿನ 67 ವರ್ಷದ ವ್ಯಕ್ತಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಗಿತ್ತು. ಆದರೆ ಸೋಮವಾರ ತಡರಾತ್ರಿ ಕಣ್ಣೂರಿನ ಶವಾಗಾರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಎಸ್ ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಖಾಸಗಿ ಆಸ್ಪತ್ರೆಯ ವೈದ್ಯರು ಯಾವ ಯುನಿವರ್ಸಿಟಿಯಿಂದ ಬಿರುದು ಪಡೆದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜೀವಂತ ವ್ಯಕ್ತಿಗೆ ಮರಣ ಹೊಂದಿದ್ದಾರೆ ಎಂದು ಪ್ರಮಾಣಪತ್ರ ನೀಡಿದ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಅದ್ಯಾವ ಯುನಿವರ್ಸಿಟಿಯಿಂದ ಬಿರುದು ಪಡೆದಿದ್ದಾರೆ?
ರೋಗಿಯನ್ನು ಬದುಕಿಸುವ ಬದಲಿಗೆ ಮರಣ ಪ್ರಮಾಣ ನೀಡಲು ತರಾತುರಿ ಮಾಡುವ ಬೇಜವಾಬ್ದಾರಿ ವೈದ್ಯರು ಇರುವ ಮಂಗಳೂರಿನ ಆಸ್ಪತ್ರೆಗಳ ಮೆಡಿಕಲ್ ಮಾಫಿಯಾದ ಕರಾಳತೆ ಅದೆಷ್ಟು ಭೀಕರವಾಗಿರಬಹುದು.
ಜಿಲ್ಲಾ ಉಸ್ತುವಾರಿಯೂ ಆಗಿರುವ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದು ಯಡವಟ್ಟೋ ಅಥವಾ ನಿರ್ಲಕ್ಷವೋ?
ತಪ್ಪಿತಸ್ಥ ವೈದ್ಯರ ವಿರುದ್ಧ ಹಾಗೂ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಕಣ್ಣೂರಿನ ಪಚ್ಚಪೊಯಿಕಾ ಮೂಲದ ವೆಳ್ಳುವಕ್ಕಂಡಿ ಪವಿತ್ರನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಪಾರ್ಶ್ವವಾಯು ಮತ್ತು ಉಸಿರಾಟದ ಸಮಸ್ಯೆಗಳ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ನಲ್ಲಿ ಇರಿಸಲಾಗಿದ್ದರೂ, ಅವರ ಸ್ಥಿತಿಯು ಹದಗೆಟ್ಟಿತ್ತು, ಯಾವುದೇ ಸುಧಾರಣೆ ಕಂಡುಬರುತ್ತಿಲ್ಲ, ವೆಂಟಿಲೇಟರ್ ನಿಂದ ತೆಗೆದುಬಿಡುವುದೇ ಒಳ್ಳೆಯದು ಎಂದು ವೈದ್ಯರು ಅಭಿಪ್ರಾಯಪಟ್ಟು ಕುಟುಂಬದವರಿಗೆ ತಿಳಿಸಿದರು. ಸಂಜೆಯ ಹೊತ್ತಿಗೆ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು. ದೇಹವನ್ನು ಊರಿಗೆ ಸಾಗಿಸಲು ವ್ಯವಸ್ಥೆ ಮಾಡಲಾಯಿತು.
ಸಂಜೆ 6.30ರ ಸುಮಾರಿಗೆ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಕೇರಳದ ಕಣ್ಣೂರಿಗೆ ಕಳುಹಿಸಲಾಯಿತು. ರಾತ್ರಿ ತುಂಬಾ ತಡವಾದ ಹಿನ್ನೆಲೆಯಲ್ಲಿ ಅವರನ್ನು ಕಣ್ಣೂರಿನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಸುಮಾರು ರಾತ್ರಿ 11.30 ಕ್ಕೆ, ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸುವಾಗ, ಕರ್ತವ್ಯದಲ್ಲಿದ್ದ ಅಟೆಂಡರ್ ಜಯನ್ ಅವರು ಅಸಹಜವಾದದ್ದನ್ನು ಗಮನಿಸಿದರು. ಆಂಬ್ಯುಲೆನ್ಸ್ ತೆರೆದಾಗ ಅವರ ಕೈಗಳು ಚಲಿಸುತ್ತಿದ್ದಂತೆ ಭಾಸವಾಗಿತ್ತು. ಆಸ್ಪತ್ರೆಯ ವೈದ್ಯಕೀಯ ತಂಡ ತಕ್ಷಣ ಮಧ್ಯ ಪ್ರವೇಶಿಸಿ ಪವಿತ್ರನ್ ಬದುಕಿರುವುದನ್ನು ಖಚಿತಪಡಿಸಿದರು.