ಹಳೆಯ ವಾಹನಗಳ ನಿಷೇಧ ಪ್ರಶ್ನಿಸಿದ್ದ ಅರ್ಜಿದಾರರಿಗೆ 8 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳ ಮೇಲೆ ಹೇರಿದ್ದ ನಿಷೇಧ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವಕೀಲರೊಬ್ಬರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ 8 ಲಕ್ಷ ರೂ. ದಂಡ ವಿಧಿಸಿದೆ.

- Advertisement -

ನ್ಯಾಯವಾದಿಯಾಗಿರುವ ಅನುರಾಗ್ ಸಕ್ಸೇನಾ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕ್ಷುಲ್ಲಕವಾಗಿದೆ ಎಂದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಎ ಎಸ್ ಬೋಪಣ್ಣ ಹಾಗೂ ಬಿ ಆರ್ ಗವಾಯಿ ಅವರಿದ್ದ ಪೀಠ ಸುಪ್ರೀಂ ಕೋರ್ಟ್‌ನಲ್ಲಿ ಈ ವಕೀಲರು ಸಲ್ಲಿಸಿದ ಯಾವುದೇ ರಿಟ್ ಅರ್ಜಿಗಳನ್ನು ನೋಂದಾಯಿಸದಂತೆ ರಿಜಿಸ್ಟ್ರಿಗೆ ಆದೇಶಿಸಿದೆ.

“ಸುಪ್ರೀಂಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಇಬ್ಬರು ವಕೀಲರು ಈ ದುಸ್ಸಾಹಸಕ್ಕೆ ಇಳಿದಿದ್ದಾರೆ. ಈ ಬಗ್ಗೆ ನಾವು ಅವರಿಗೆ ಎಚ್ಚರಿಕೆ ನೀಡಿದ್ದೇವೆ. ಅರ್ಜಿದಾರರಿಗೆ 8 ಲಕ್ಷ ರೂ. ದಂಡ ವಿಧಿಸಲಾಗಿದೆ. ವಕೀಲರ ಯಾವುದೇ ರಿಟ್ ಅರ್ಜಿ ಸ್ವೀಕರಿಸಬಾರದು” ಎಂದು ನ್ಯಾಯಾಲಯ ಹೇಳಿದೆ.

- Advertisement -

ಹಳೆಯ ವಾಹನಗಳಿಗೆ ನಿಷೇಧ ಹೇರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎಂದು ಪಿಐಎಲ್‌ ಪ್ರತಿಪಾದಿಸಿತ್ತು. “ಚಾಲ್ತಿಯಲ್ಲಿರುವ ವಾಹನಗಳನ್ನು ನಿಷೇಧಿಸುವುದರಿಂದ ಹೊಸ ಕಾರುಗಳ ಉತ್ಪಾದನೆ ಹೆಚ್ಚು ಇಂಗಾಲ ಉತ್ಪಾದಿಸುತ್ತದೆ. ಹೀಗಾಗಿ 10 ಮತ್ತು 15 ವರ್ಷಗಳ ನಿಯಮದಲ್ಲಿ ಹುರುಳಿಲ್ಲ. ಕೆಲವು ಸ್ಥಳಗಳಿಗೆ ಮಾತ್ರ ಈ ನಿಯಮ ಅನ್ವಯಿಸಲಾಗಿದೆ ಏಕೆ? ಎಲ್ಲಾ ಕಡೆ ಏಕೆ ಇಲ್ಲ” ಎಂದು ಅರ್ಜಿದಾರರು ಖುದ್ದು ವಾದ ಮಂಡಿಸಿದ್ದರು.

ಆದರೆ ಪ್ರಕರಣ ಈಗಾಗಲೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಪೀಠವು ಅರ್ಜಿದಾರರಿಗೆ ಆರಂಭದಲ್ಲಿ ಎಚ್ಚರಿಕೆ ನೀಡಿತು. ಆದರೂ ಅರ್ಜಿದಾರರು ತಮ್ಮ ವಾದ ಮಂಡಿಸಿದರು. ಕಡೆಗೆ ದಂಡ ವಿಧಿಸಿದ ನ್ಯಾಯಾಲಯ ಮನವಿಯನ್ನು ವಜಾಗೊಳಿಸಿತು.

(ಕೃಪೆ: ಬಾರ್ ಆ್ಯಂಡ್ ಬೆಂಚ್)



Join Whatsapp