ಎರಡನೇ ಬಾರಿ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್

Prasthutha|

ವಿಶ್ವ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್, ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ-2022ರ ಮಹಿಳಾ ವಿಭಾಗದ ಚಾಂಪಿಯನ್ ಪಟ್ಟವನ್ನಲಂಕರಿಸಿದ್ದಾರೆ. ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಅಮೆರಿಕದ 18ರ ಹರೆಯದ ಆಟಗಾರ್ತಿ ಕೊಕೊ ಗಾಫ್ ಸವಾಲನ್ನು ಸ್ವಿಯಾಟೆಕ್ ಸುಲಭವಾಗಿ ಹಿಮ್ಮೆಟ್ಟಿಸಿದರು. ಫಿಲಿಪ್ ಚಾಟ್ರಿಯರ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ 15ನೇ ಶ್ರೇಯಾಂಕಿತೆ ಕೊಕೊ ಗಾಫ್ 6-1, 6-3 ನೇರ ಸೆಟ್‌ಗಳ ಅಂತರದಲ್ಲಿ  ಸ್ವಿಯಾಟೆಕ್‌ಗೆ  ಶರಣಾದರು. 

- Advertisement -

ಪ್ರಶಸ್ತಿ ಸುತ್ತಿನ ಪಂದ್ಯವನ್ನು ಗೆಲ್ಲುವುದರ ಮೂಲಕ ಪೊಲೆಂಡ್‌ನ 21ರ ಹರೆಯದ ಆಟಗಾರ್ತಿ, ಸತತ 35 ಪಂದ್ಯಗಳನ್ನು ಗೆದ್ದ ದಾಖಲೆ ನಿರ್ಮಿಸಿದ್ದಾರೆ. ಸ್ವಿಯಾಟೆಕ್ ಪಾಲಿಗೆ ಇದು 2ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯಾಗಿದೆ. 2020ರ ಫ್ರೆಂಚ್ ಓಪನ್ ಟೂರ್ನಿಯಲ್ಲೂ ಇಗಾ ಚಾಂಪಿಯನ್ ಆಗಿದ್ದರು. ಪ್ರಸಕ್ತ ವರ್ಷ ಸ್ವಿಯಾಟೆಕ್ ಗೆಲ್ಲುತ್ತಿರುವ 6ನೇ ಪ್ರಶಸ್ತಿ ಇದಾಗಿದ್ದು, ಒಟ್ಟು 9ನೇ ಪ್ರಶಸ್ತಿಯಾಗಿದೆ. ವಿಶೇಷವೆಂದರೆ ಫೈನಲ್ ಪಂದ್ಯಗಳಲ್ಲಿ ಇದುವರೆಗೂ ಯಾವುದೇ ಸೆಟ್ ಕಳೆದುಕೊಳ್ಳದೆ (18-0) ಚಾಂಪಿಯನ್ ಆದ ವಿಶೇಷ ದಾಖಲೆಯೂ ಸ್ವಿಯಾಟೆಕ್ ಪಾಲಾಗಿದೆ.

2000ರ ನಂತರ ಸತತವಾಗಿ ಅತಿ ಹೆಚ್ಚು ಗೆಲುವು ಸಾಧಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್ (2000ರಲ್ಲಿ 35 ಜಯ) ಮೊದಲ ಸ್ಥಾನದಲ್ಲಿದ್ದು, ಆ ದಾಖಲೆಯನ್ನು ಪೊಲೆಂಡ್‌ನ 21ರ ಹರೆಯದ ಆಟಗಾರ್ತಿ ಸಮದೂಗಿಸಿದ್ದಾರೆ. 

- Advertisement -

ಸೆಮಿಫೈನಲ್‌ನಲ್ಲಿ ರಷ್ಯಾದ ದರಿಯಾ ಕಸತ್ಕಿನಾ ವಿರುದ್ಧ ಗೆಲುವು ಸಾಧಿಸಿದ್ದ ಸ್ವಿಯಾಟೆಕ್ , ಸತತ 34ನೇ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದರು. ಮತ್ತೊಂದೆಡೆ ಕೊಕೊ ಗಾಫ್ ಸೆಮಿ ಹೋರಾಟದಲ್ಲಿ ಇಟಲಿಯ ಮಾರ್ಟಿನಾ ಟ್ರೆವಿಸನ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ್ದರು. ಆ ಮೂಲಕ 2004ರ ಬಳಿಕ ಗ್ರ್ಯಾನ್ಸ್ಲಾಂ ಮಹಿಳಾ ಸಿಂಗಲ್ಸ್ ಫೈನಲ್ ತಲುಪಿದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದರು. 

ಡಬಲ್ಸ್‌ನಲ್ಲೂ ಫೈನಲ್ ತಲುಪಿರುವ ಗಾಫ್
ಮಹಿಳೆಯೆರ ಸಿಂಗಲ್ಸ್‌ ಫೈನಲ್‌ನಲ್ಲಿ ಸೋಲು ಅನುಭವಿಸಿರುವ ಗಾಫ್, ಭಾನುವಾರ ನಡೆಯುವ ಟೂರ್ನಿಯ ಮಹಿಳಾ ಡಬಲ್ಸ್ ಫೈನಲ್‌ನಲ್ಲೂ ಕಣಕ್ಕಿಳಿಯಲಿದ್ದಾರೆ. ಕೊಕೊ ಗಾಫ್ ಅಮೆರಿಕದ ಜೆಸ್ಸಿಕಾ ಪೆಗುಲಾ ಜೊತೆಗೂಡಿ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.  ಕಳೆದ ವರ್ಷ ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ, ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದ್ದರು. ಒಟ್ಟಾರೆ ಇದುವರೆಗೆ 7 ಮಂದಿ ಫ್ರೆಂಚ್ ಓಪನ್‌ನಲ್ಲಿ ಸಿಂಗಲ್ಸ್ ಜೊತೆ ಡಬಲ್ಸ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.



Join Whatsapp