ದುಬೈ: ಹಸಿದವರಿಗೆ ಉಚಿತ ಆಹಾರ ನೀಡುವ ಸಲುವಾಗಿ ದುಬೈ ಸರ್ಕಾರ “Bread for all”ಯೋಜನೆಯನ್ನು ಆರಂಭಿಸಿದೆ.
ನಿರ್ಗತಿಕ ಕುಟುಂಬಗಳು ಮತ್ತು ಕಾರ್ಮಿಕರನ್ನು ಗುರಿಯಾಗಿಟ್ಟುಕೊಂಡು ಔಕಾಫ್ ಮತ್ತು ಮೈನರ್ಸ್ ಅಫೇರ್ಸ್ ಫೌಂಡೇಶನ್ ಅಡಿಯಲ್ಲಿ ಮುಹಮ್ಮದ್ ಬಿನ್ ರಾಶಿದ್ ಗ್ಲೋಬಲ್ ಸೆಂಟರ್ ಫಾರ್ ಎಂಡೋಮೆಂಟ್ ಕನ್ಸಲ್ಟೆನ್ಸಿ ಉಚಿತ ಬ್ರೆಡ್ ಯೋಜನೆಯನ್ನು ಘೋಷಿಸಿದೆ.
ಇದು ದಿನದ ವಿವಿಧ ಸಮಯಗಳಲ್ಲಿ ಬಡವರಿಗೆ ಮತ್ತು ಕಾರ್ಮಿಕರಿಗೆ ಉಚಿತ ಬ್ರೆಡ್ ನೀಡುವ ವ್ಯವಸ್ಥೆಯಾಗಿದ್ದು, ಲೋಕೋಪಕಾರದ ಆಧುನಿಕ ಮತ್ತು ಸಮರ್ಥನೀಯ ಮಾದರಿಯನ್ನು ಪ್ರಸ್ತುತಪಡಿಸುತ್ತದೆ.
ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಅವರ ದೃಷ್ಟಿಕೋನವನ್ನು ಈ ಯೋಜನೆಯ ಮೂಲಕ ಸಾಕಾರಗೊಳಿಸಲಾಗಿದ್ದು, ಅಗತ್ಯವಿರುವವರಿಗೆ ತಾಜಾ ಬ್ರೆಡ್ ಅನ್ನು ತಲುಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಅಲ್ ಮಿಶಾರ್, ಅಲ್ ವರ್ಕಾ, ಮಿರ್ದಿಫ್, ನಾದ್ ಅಲ್ ಶೆಬಾ, ನಾದ್ ಅಲ್ ಹಮರ್, ಅಲ್ ಖೂಸ್ ಮತ್ತು ಅಲ್ ಬದಾದಲ್ಲಿನ ಸೂಪರ್ ಮಾರುಕಟ್ಟೆಗಳಲ್ಲಿ ಅಳವಡಿಸಲಾಗಿರುವ ಸ್ಮಾರ್ಟ್ ಯಂತ್ರಗಳ ಮೂಲಕ ಆರ್ಡರ್ ಬಟನ್ ಒತ್ತಿದ ನಂತರ ಸ್ವಲ್ಪ ಸಮಯದೊಳಗೆ ಬ್ರೆಡ್ ಸಿಗುವ ವ್ಯವಸ್ಥೆಯಾಗಿದೆ.
ಈ ಯೋಜನೆಯನ್ನು ಬೆಂಬಲಿಸಲು ದೇಣಿಗೆ ನೀಡುವ ಕಾರ್ಯವಿಧಾನವನ್ನು ಸಹ ಯಂತ್ರದಲ್ಲಿ ಅಳವಡಿಸಲಾಗಿದ್ದು, SMS ಮೂಲಕವೂ ದೇಣಿಗೆ ನೀಡಬಹುದಾಗಿದೆ.
10 ದಿರ್ಹಂ ದೇಣಿಗೆ ನೀಡಲು 3656, 50 ದಿರ್ಹಂ ನೀಡಲು 3658, 100 ದಿರ್ಹಂ ನೀಡಲು 3659 ಕ್ಕೆ ಹಾಗೂ 500 ದಿರ್ಹಮ್ ನೀಡಲು ಬಯಸುವವರು 3679 ಕ್ಕೆ SMS ಕಳಿಸಬಹುದಾಗಿದೆ.
DubaiNow ಮೊಬೈಲ್ ಆ್ಯಪ್ ಮತ್ತು ಆನ್‌ಲೈನ್‌ನಲ್ಲಿ www.mbrgcec.ae ನಲ್ಲೂ ದೇಣಿಗೆ ನೀಡಬಹುದಾಗಿದೆ.