ಬೆಂಗಳೂರು: ರಾಜ್ಯಾದ್ಯಂತ ಉಚಿತವಾಗಿ ಉತ್ತಮ ಡಯಾಲಿಸಿಸ್ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಹೊಸ ಡಯಾಲೈಸರ್ ಯಂತ್ರಗಳ ಸೇವೆಗೆ ಚಾಲನೆ ನೀಡಿದೆ. ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ನೂತನ ಡಯಾಲಿಸಿಸ್ ಯಂತ್ರಗಳ ಸೇವೆಗೆ ಚಾಲನೆ ನೀಡಿದ್ದಾರೆ.
ನೂತನ ಡಯಾಲಿಸಿಸ್ ಯಂತ್ರಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡಯಾಲಿಸಿಸ್ ಆರೋಗ್ಯ ಸೇವೆಯನ್ನು ಸದೃಢಗೊಳಿಸುವತ್ತ ಆರೋಗ್ಯ ಇಲಾಖೆ ಹಾಗೂ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದಿದ್ದಾರೆ.
ಎಲ್ಲೆಡೆ ಈ ಹಿಂದೆ ಇದ್ದ ಡಯಾಲಿಸಿಸ್ ವ್ಯವಸ್ಥೆ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿತ್ತು. ಬಹುಬಳಕೆಯ ಡಯಾಲಿಸಿಸ್ ಯಂತ್ರಗಳಿಂದ ಕೆಲವೊಮ್ಮ ರೋಗಿಗಳಿಗೆ ಸೋಂಕು ತಗುಲುತ್ತಿತ್ತು. ಅಲ್ಲದೇ ಸಾಕಷ್ಟು ಯಂತ್ರಗಳು ಡಯಾಲಿಸಿಸ್ ನಡೆಸುವ ವೇಳೆ ಕೆಟ್ಟು ನಿಲ್ಲುತ್ತಿದ್ದವು. ಇದೆಲ್ಲವನ್ನ ಗಮನಿಸಿ ರಾಜ್ಯದಾದ್ಯಂತ ಹೊಸ ಡಯಾಲಿಸಿಸ್ ಯಂತ್ರಗಳನ್ನ ಸರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಳವಡಿಸಲು ತೀರ್ಮಾನಿಸಿದ್ದೇವು. ನಾವು ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಇಂದು ಫಲ ನೀಡುತ್ತಿದೆ. ಸೋಂಕು ರಹಿತ ಡಯಾಲಿಸಿಸ್ ಆರೋಗ್ಯ ಸೇವೆ ಇನ್ಮುಂದೆ ರಾಜ್ಯದ ಜನಸಾಮಾನ್ಯರಿಗೆ ದೊರಯಲಿದೆ ಎಂದು ಸಚಿವರು ಹೇಳಿದ್ದಾರೆ.