ಪಾಕಿಸ್ತಾನ-ಝಿಂಬಾಬ್ವೆ ಪಂದ್ಯದ ಬಳಿಕ ಪ್ರಧಾನಿಗಳ ನಡುವೆ ʻಫ್ರಾಡ್‌ ಪಾಕ್ ಮಿಸ್ಟರ್ ಬೀನ್‌ʼ ಟ್ವೀಟ್ ವಾರ್‌ !

Prasthutha|

ಪರ್ತ್‌: ಟಿ20 ವಿಶ್ವಕಪ್‌ ಟೂರ್ನಿಯಲ್ಲಿ  ಗುರುವಾರ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು, ಝಿಂಬಾಬ್ವೆ 1 ರನ್‌ಗಳ ಅಂತರದಲ್ಲಿ ರೋಚಕವಾಗಿ ಮಣಿಸಿತ್ತು. ಪಂದ್ಯ ಮುಗಿಯುತ್ತಲೇ ಎರಡು ರಾಷ್ಟ್ರಗಳ ನಡುವಿನ ಮುಖ್ಯಸ್ಥರ ಮತ್ತು ಕ್ರಿಕೆಟ್‌ ಅಭಿಮಾನಿಗಳ ನಡುವೆ ಟ್ವಿಟರ್‌ನಲ್ಲಿ ʻಫ್ರಾಡ್ ಪಾಕ್ ಮಿಸ್ಟರ್ ಬೀನ್’ ಟ್ರೆಂಡಿಂಗ್‌ ಆಗಿದೆ. ತಮ್ಮ ತಂಡ ಗೆದ್ದ ಖುಷಿಯಲ್ಲಿ ಝಿಂಬಾಬ್ವೆ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನದ ಕಾಲೆಳೆಯುವ ಕಾರ್ಯದಲ್ಲಿ ತೊಡಗಿದ್ದಾರೆ.

- Advertisement -

ಸ್ಮರಣೀಯ ಗೆಲುವಿನ ಬಳಿಕ ಝಿಂಬಾಬ್ವೆ ಅಧ್ಯಕ್ಷ ಎಮರ್ಸನ್, ‘ಜಿಂಬಾಬ್ವೆಗೆ ಎಂಥಾ ಗೆಲುವು ! ಆಟಗಾರರಿಗೆ ಅಭಿನಂದನೆಗಳು. ಮುಂದಿನ ಬಾರಿ, ನಿಜವಾದ ಮಿಸ್ಟರ್ ಬೀನ್ ಅನ್ನು ಕಳುಹಿಸಿ’ ಎಂದು ಎಂದು ಟ್ವೀಟ್‌ ಮಾಡಿದ್ದರು.

ಆದರೆ ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್, ‘ನಿಜವಾದ ಮಿಸ್ಟರ್‌ ಬೀನ್‌ ನಮ್ಮಲ್ಲಿ ಇಲ್ಲದಿರಬಹುದು. ಆದರೆ, ನಿಜವಾದ ಕ್ರಿಕೆಟ್‌ ಸ್ಫೂರ್ತಿಯಿದೆ. ನಾವು ಪಾಕಿಸ್ತಾನಿಯರಿಗೆ ಪುಟಿದೇಳುವ ತಮಾಷೆಯ ಅಭ್ಯಾಸವಿದೆ’. ‘ಮಿಸ್ಟರ್‌ ಪ್ರೆಸಿಡೆಂಟ್, ಅಭಿನಂದನೆಗಳು. ನಿಮ್ಮ ತಂಡ ನಿಜವಾಗಿಯೂ ಇಂದು ಚೆನ್ನಾಗಿ ಆಡಿದೆ’ ಎಂದು ಎಂದು ಟ್ವಿಟರ್‌ನಲ್ಲೇ ತಿರುಗೇಟು ನೀಡಿದ್ದಾರೆ.

- Advertisement -

ಏನಿದು ಫ್ರಾಡ್‌ ಪಾಕ್‌ ಬೀನ್‌ ವಿಚಾರ ?

ಝಿಂಬಾಬ್ವೆ ಪಂದ್ಯಕ್ಕೂ ಮುನ್ನ ಅಕ್ಟೋಬರ್‌ 25ರಂದು ತಂಡದ ಸದಸ್ಯರು ಅಭ್ಯಾಸ ನಡೆಸುತ್ತಿದ್ದ ಫೋಟೋಗಳನ್ನು ಟ್ವಟರ್‌ನಲ್ಲಿ ಹಂಚಿಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌, ಮುಂದಿನ ಸವಾಲಿಗೆ ಸಜ್ಜಾಗುತ್ತಿದ್ದೇವೆ ಎಂದು ಕ್ಯಾಪ್ಷನ್‌ ಕೊಟ್ಟಿತ್ತು. ಈ ಪೋಸ್ಟ್‌ನ ಕೆಳಗೆ ಪ್ರತಿಕ್ರಿಯಿಸಿದ್ದ ಜಿಂಬಾಬ್ವೆ ಅಭಿಮಾನಿ ಎನ್‌ಗುಗಿ ಚಸುರ ಎಂಬುವವರು, ಮೊದಲ ಬಾರಿಗೆ ʻಫ್ರಾಡ್‌ ಪಾಕ್‌ ಬೀನ್‌; ವಿಚಾರವನ್ನು ಪ್ರಸ್ತಾಪಿಸಿದ್ದರು. ‘ ನಾವು ಜಿಂಬಾಬ್ವೆಯವರಾಗಿ ನಿಮ್ಮನ್ನು ಕ್ಷಮಿಸುವುದಿಲ್ಲ… ಮಿಸ್ಟರ್ ಬೀನ್ ರೋವನ್ ಬದಲಿಗೆ ನೀವು ಒಮ್ಮೆ ಫ್ರಾಡ್ ಪಾಕ್ ಬೀನ್ ಅನ್ನು ನಮ್ಮ ದೇಶಕ್ಕೆ ಕಳುಹಿಸಿದ್ದಿರಿ. ಆ ಲೆಕ್ಕವನ್ನು ನಾಳೆ ಚುಕ್ತಾ ಮಾಡುತ್ತೇವೆ. ನಿಮ್ಮನ್ನು ಪಾರುಮಾಡಲು ಮಳೆಗಾಗಿ ಪ್ರಾರ್ಥಿಸಿ’ ಎಂದು ಪ್ರತಿಕ್ರಿಯೆ ಕೊಟ್ಟಿದ್ದರು.

ಇದಕ್ಕೆ ಪಾಕಿಸ್ತಾನ ತಂಡದ ಅಭಿಮಾನಿಯೊಬ್ಬ ʻಏನಾಯಿತು ಸಹೋದರʼ ಎಂದು ಪ್ರಶ್ನಿಸಿದ್ದ. ʻ ಸ್ಥಳೀಯ ಕೃಷಿ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಮಿಸ್ಟರ್ ಬೀನ್ ರೋವನ್ ಭಾಗವಹಿಸಬೇಕಾಗಿತ್ತು. ಅವರ ಬದಲಿಗೆ ಫ್ರಾಡ್ ಪಾಕ್ ಬೀನ್ ಅನ್ನು ನಮ್ಮ ದೇಶಕ್ಕೆ ಕಳುಹಿಸಿದ್ದರುʼ ಎಂದು ಎನ್‌ಗುಗಿ ಚಸುರ ಉತ್ತರಿಸಿದ್ದರು.

ಗುರುವಾರದ ಪಂದ್ಯದಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಝಿಂಬಾಬ್ವೆ, ಪಾಕ್‌ ವಿರುದ್ಧ ಗೆಲುವಿನ ಬಾವುಟ ಹಾರಿಸಿ  ಬಳಿಕ ಎನ್‌ಗುಗಿ ಚಸುರ ಟ್ವೀಟ್‌ ವ್ಯಾಪಕವಾಗಿ ವೈರಲ್‌ ಆಗಿತ್ತು. ಹೀಗಾಗಿ ‘ಫ್ರಾಡ್‌ ಪಾಕ್‌ ಮಿಸ್ಟರ್‌ ಬೀನ್‌’ ಎಂಬುದು ಟ್ರೆಂಡ್‌ ಆಗಿತ್ತು.  ಪಂದ್ಯದ ಬಳಿಕ ತನ್ನದೇ ಟ್ವೀಟ್‌ನ ಕೆಳಗಡೆ ಮತ್ತೊಂದು ಪ್ರತಿಕ್ರಿಯೆ ಹಾಕಿದ್ದ ಎನ್‌ಗುಗಿ ಚಸುರ, “ನಾನು ಅವರ ಬಳಿ ಹೇಳಿದ್ದೆ. ಆದರೆ ಅವರು ಕೇಳಿಸಿಕೊಳ್ಳಲಿಲ್ಲ” ಎಂದು ಮತ್ತೆ ಕಾಲೆಳೆದಿದ್ದರು.



Join Whatsapp