ಗೃಹ ಸಚಿವ ಜ್ಞಾನೇಂದ್ರ ಹೆಸರಲ್ಲಿ ವಂಚನೆ | ಬಿಜೆಪಿ ಮುಖಂಡನ ಬಂಧನ

Prasthutha|

ಬೆಂಗಳೂರು: ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಮತ್ತು ಕಬ್ಬನ್ ಪಾರ್ಕ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಿಜೆಪಿ ಮುಖಂಡನೋರ್ವನನ್ನು ಬಂಧಿಸಿದ್ದಾರೆ.
ಬಂಧಿತ ಬಿಜೆಪಿ ಮುಖಂಡನನ್ನು ಶಿವಮೊಗ್ಗ ಮೂಲದ ಭವಾನಿ ರಾವ್ ಎಂದು ಗುರುತಿಸಲಾಗಿದೆ.

- Advertisement -


ವಿಜಯನಗರ ಮೂಲದ ನಿವಾಸಿ ಕರ್ನಾಟಕ ಬಾರ್ ಆ್ಯಂಡ್ ರೆಸ್ಟೋರೆಂಟ್ ಓನರ್ಸ್ ವಿಮೆನ್ ಎಂಪ್ಲಾಯೀಸ್ ಸರ್ವಿಸ್ ಅಸೋಸಿಯೇಷನ್ ನ ಜಂಟಿ ಕಾರ್ಯದರ್ಶಿ ಸುರೇಶ್ ಎಂಬವರಿಗೆ ಭವಾನಿ ರಾವ್ 25ಲಕ್ಷ ರೂ. ವಂಚಿಸಿದ್ದಾನೆ. ಈ ಬಗ್ಗೆ ಸುರೇಶ್ ದೂರು ದಾಖಲಿಸಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ವಂಚನೆ ನಡೆದಿದ್ದು ಹೇಗೆ ?

- Advertisement -


ಲೇಡಿಸ್ ಸರ್ವಿಸ್ ಬಾರ್ ಗಳನ್ನು ಮುಚ್ಚುವಂತೆ ಪೊಲೀಸ್ ಆಯುಕ್ತರು ಇತ್ತೀಚೆಗಷ್ಟೆ ಆದೇಶ ನೀಡಿದ್ದರು. ಈ ಸಂಬಂಧ ಎರಡು ದಿನಗಳ ಕಾಲ ಬಾರ್ ಮುಚ್ಚಲಾಗಿತ್ತು. ಈ ವೇಳೆ ಆರೋಪಿ ಭವಾನಿ ರಾವ್, ಸುರೇಶ್ ಬಗ್ಗೆ ವಿಚಾರಿಸಿಕೊಂಡು ಬಾರ್ ಗೆ ಭೇಟಿ ನೀಡಿದ್ದಾನೆ. ನಾನೊಬ್ಬ ಶಿವಮೊಗ್ಗ ಬಿಜೆಪಿ ಮುಖಂಡ ಎನ್ನುತ್ತಾ ಗೃಹ ಸಚಿವರ ಪರಿಚಯ ಹೇಳಿ ಅವರೊಂದಿಗೆ ತೆಗೆದಿದ್ದ ಫೋಟೋವನ್ನು ತೋರಿಸಿದ್ದಾನೆ ಎನ್ನಲಾಗಿದೆ.


ಪೊಲೀಸರಿಂದ ನಿಮಗಾಗುತ್ತಿರುವ ತೊಂದರೆಗಳಿಗೆ ನಾನು ಸಹಾಯ ಮಾಡುತ್ತೇನೆಂದು ನಂಬಿಸಿ, ನೀವು 1.25 ಕೋಟಿ ರೂ. ನೀಡಿದರೆ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತೇನೆ ಎಂದು ಹೇಳಿದ್ದಾನೆ. ಆರೋಪಿಯ ಮಾತನ್ನು ನಂಬಿದ್ದ ಸುರೇಶ್ ಅಸೋಸಿಯೇಶನ್ ನ 44 ಮಂದಿಯಿಂದ ಹಣ ಸಂಗ್ರಹಿಸಿ 1.25 ಕೋಟಿ ರೂ. ಗಳನ್ನು ನಗರದ ಹೋಟೆಲ್ ವೊಂದರಲ್ಲಿ ಆತನಿಗೆ ನೀಡಿದ್ದಾರೆ.
ಆರೋಪಿಯು ಹಣ ಪಡೆದ ಬಳಿಕ ಮಾತು ಬದಲಿಸಿದ್ದು, ಈ ಸಂಬಂಧ ವಿಚಾರಿಸಿದಾಗ ಆರೋಪಿಯು ಮೋಸ ಮಾಡಿರುವುದಾಗಿ ಕಂಡು ಬಂದಿದೆ. ನಂತರ ನಡೆದ ಬೆಳವಣಿಗೆಯಲ್ಲಿ ಆರೋಪಿಯು 1 ಕೋಟಿ ರೂ. ಹಿಂತಿರುಗಿಸಿದ್ದು ಬಾಕಿ 25ಲಕ್ಷ ನೀಡುವುದಿಲ್ಲ ಎಂದಿದ್ದಾನೆ ಎನ್ನಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಈತ ಇನ್ನೂ ಹಲವು ವಂಚನೆಗಳಲ್ಲಿ ಭಾಗಿಯಾಗಿರುವ ಮಾಹಿತಿ ದೊರಕಿದೆ ಎಂದು ಪೊಲೀಸರು ಹೇಳಿದ್ದಾರೆ.



Join Whatsapp