ಕೊಚ್ಚಿ: ಪೊಲೀಸರ ಸಮವಸ್ತ್ರ ಧರಿಸಿ ವೃದ್ಧೆಯ 7 ಪವನ್ ಚಿನ್ನ ದೋಚಿದ್ದ ಭಟ್ಕಳ ಮೂಲದ ನಾಲ್ವರು ದುಷ್ಕರ್ಮಿಗಳನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಕೆಲವು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕರಾವಳಿ ಮೂಲದ ಗ್ಯಾಂಗ್ ಕೇರಳವನ್ನೇ ಹೆಚ್ಚು ಕೇಂದ್ರೀಕೃತವಾಗಿಸಿಕೊಂಡಿತ್ತು. ಇಂತಹ ಅನೇಕ ಅಪರಾಧಗಳನ್ನು ಎಸಗಿರುವ ಹಿನ್ನೆಲೆಯನ್ನು ಈ ಗ್ಯಾಂಗ್ ಹೊಂದಿದ್ದು, ತ್ರಿಶೂರ್ ಪೊಲೀಸ್ ತಂಡ ಕೊಚ್ಚಿಯನ್ನು ತಲುಪಿ, ವಿಚಾರಣೆ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದೆ. ಎಸಿಪಿ ರಾಜಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
ಕಳೆದ ಜ. 16 ರಂದು ಎರ್ನಾಕುಲಂನ ದಕ್ಷಿಣ ಮೇಲ್ಸೇತುವೆಯ ಬಳಿ ಈ ಗ್ಯಾಂಗ್, ವೃದ್ಧೆಯನ್ನು ತಡೆದು ಬೆಲೆ ಬಾಳುವ ವಸ್ತುಗಳನ್ನು ದೋಚಿತ್ತು. ನಾಲ್ವರು ಖದೀಮರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು ಮತ್ತು ವೃದ್ಧೆಯನ್ನು ಹೆದರಿಸಿ 7 ಪವನ್ ಚಿನ್ನವನ್ನು ದೋಚಿದ್ದರು.
ಸಂತ್ರಸ್ತ ಮಹಿಳೆಯ ಪ್ರಕಾರ ಈ ಗ್ಯಾಂಗ್ ಮಲಯಾಳಂ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿತ್ತು. ವೃದ್ಧೆ ಒದಗಿಸಿದ ಮೊಬೈಲ್ ಟವರ್ ಲೊಕೇಶನ್ ಮೂಲಕ ದಾಳಿಕೋರರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಇಂತಹ ಹಲವು ಗ್ಯಾಂಗ್’ಗಳು ನಗರದಲ್ಲಿ ಸಕ್ರಿಯವಾಗಿವೆ ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.