ದೇವನಹಳ್ಳಿ: ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಹಳ್ಳಿ ಬಳಿ ನಡೆದಿದೆ.
ಮನೋಜ್ ಕುಮಾರ್ ಸದಯ್ (35), ರಾಮ್ ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದಯ್ (22) ಮೃತ ದುರ್ದೈವಿಗಳಾಗಿದ್ದಾರೆ.
ಗುರುವಾರ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ನಿರ್ಮಾಣದ ಹಂತದಲ್ಲಿದ್ದ ಬಹು ಮಹಡಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರಿಗಾಗಿ ನಿರ್ಮಿಸಿದ್ದ ಶೆಡ್ ಮೇಲೆ ಪಕ್ಕದ ಹುಡಾನ್ ಕಂಪನಿಯ ವೇರ್ ಹೌಸ್ ನ ಗೋಡೆ ಮಳೆಯಿಂದಾಗಿ ಕುಸಿದಿದ್ದು ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕರು ಉತ್ತರ ಭಾರತೀಯ ಮೂಲದ ನಿವಾಸಿಗಳಾಗಿದ್ದು, ಒಟ್ಟು 8 ಕಾರ್ಮಿಕರು ಶೆಡ್ ನಲ್ಲಿ ಮಲಗಿದ್ದರು. ಉಳಿದ ನಾಲ್ವರು ಕಾರ್ಮಿಕರನ್ನು ಸ್ಥಳೀಯರು ರಕ್ಷಿಸಿದ್ದು, ವೈಟ್ ಫೀಲ್ಡ್ ನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಹೊಸಕೋಟೆ ಡಿವೈಎಸ್ ಪಿ ಉಮಾಶಂಕರ್ ಹಾಗೂ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.