ಅಹ್ಮದಾಬಾದ್: ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಉಂಟಾದ ಪರಿಣಾಮ ನಾಲ್ಕು ಮಕ್ಕಳು ಸೇರಿ 9 ಮಂದಿ ಸಾವನ್ನಪ್ಪಿದ ಘಟನೆ ಗುಜರಾತಿನ ಅಹಮದಾಬಾದ್ ನಗರದ ಹೊರ ವಲಯದಲ್ಲಿ ನಡೆದಿದೆ.
ಜುಲೈ 20ರ ರಾತ್ರಿ ದುರಂತ ಸಂಭವಿಸಿದ್ದು, 8 ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಮರಣ ಹೊಂದಿದರು. ಇನ್ನೊಬ್ಬರು ಇಂದು ಸಾವಿಗೀಡಾದರು. ಇವರೆಲ್ಲರೂ ಮಧ್ಯ ಪ್ರದೇಶದಿಂದ ಬಂದ ಕೂಲಿ ಕಾರ್ಮಿಕರಾಗಿದ್ದರು. ಒಬ್ಬರು ಸಾವಿನ ಜೊತೆ ಹೋರಾಡುತ್ತಿದ್ದಾರೆ ಎಂದು ಅಸ್ಲಾಲಿ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿ. ಆರ್. ಜಡೇಜಾ ತಿಳಿಸಿದ್ದಾರೆ.
10 ಮಂದಿ ಕಾರ್ಮಿಕರ ಕುಟುಂಬ ಒಂದು ಸಣ್ಣ ಕೋಣೆಯಲ್ಲಿ ವಾಸವಿದ್ದು ಅಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.