ಹಾಸನ: ಅರಸೀಕೆರೆ ತಾಲೂಕಿನ ಅಮರಗಿರಿ ಮಾಲೇಕಲ್ಲು ತಿರುಪತಿ ದೇವಸ್ಥಾನದ ವೆಂಕಟಮುರಿ ಕಲ್ಯಾಣಿ ಪಕ್ಕ ನಿರ್ಮಾಣ ಹಂತದಲ್ಲಿದ್ದ ಮ್ಯೂಸಿಯಂನ ಶ್ರೀನಿವಾಸ-ಪದ್ಮಾವತಿ ಕಲ್ಯಾಣದ ಕಲಾಕೃತಿಗಳನ್ನು ಹಾನಿ ಮಾಡಿದ್ದ ಆರೋಪಿಗಳು ಖಾಕಿ ಪಡೆಗೆ ಸಿಕ್ಕಿ ಬಿದ್ದಿದ್ದಾರೆ.
ಪ್ರಕರಣ ಸಂಬಂಧ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಮೂವರು ಸಂಘರ್ಷಕ್ಕೊಳಗಾದ ಬಾಲಕರು ಸೇರಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮರಗಿರಿ ಮಾಲೇಕಲ್ಲು ತಿರುಪತಿ ದೇವಸ್ಥಾನದ ವೆಂಕಟಮುರಿ ಕಲ್ಯಾಣಿಯ ಪಕ್ಕ ಮ್ಯೂಸಿಯಂ ನಿರ್ಮಾಣ ಮಾಡಿ ಅದರಲ್ಲಿ ಶ್ರೀನಿವಾಸ-ಪದ್ಮಾವತಿ ಕಲ್ಯಾಣದ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೇ 30ರಂದು ಮಷ್ಕರ್ಮಿಗಳು ಮ್ಯೂಸಿಯಂನ ಒಳಗೆ ಅತಿಕ್ರಮ ಪ್ರವೇಶ ಮಾಡಿ, ವಿಗ್ರಹ ಶಿಲ್ಪಿಗಳು ಮ್ಯೂಸಿಯಂನ ಒಂದು ಬದಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಮ್ಯೂಸಿಯಂನ ಇನ್ನೊಂದು ಬದಿಯಲ್ಲಿ ನಿರ್ಮಾಣ ಹಂತದಲ್ಲಿದ್ದ 13 ಕಲಾವಿಗ್ರಹಗಳನ್ನು ಹಾನಿಮಾಡಿದ್ದರು.
ಈ ಸಂಬಂಧ ಶಿಲ್ಪಿ ಡಾ.ಆರ್.ಎಸ್.ರಾಜೇಶ್ ಅವರು ನೀಡಿದ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿತ್ತು.
ಬಳಿಕ ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ಡಿ.ಅಶೋಕ ಅವರ ನೇತೃತ್ವದಲ್ಲಿ ಅರಸೀಕೆರೆ ಗ್ರಾಮಾಂತರ ಸಿಪಿಐ ಕೆ.ಎಂ.ವಸಂತ ಗ್ರಾಮಾಂತರ ಠಾಣೆ ಪಿಎಸ್ ಐ ಲಕ್ಷ್ಮಣ್.ಡಿ. ಬಾಣಾವರ ಠಾಣೆ ಪಿಎಸ್ ಐ ಅಭಿಜಿತ್.ಎಸ್., ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿತ್ತು. ತಂಡು ತಾಲೂಕಿನ ಕಾರೇಹಳ್ಳಿ ಹಟ್ಟಿ ಗ್ರಾಮದ ಅಭಿಷೇಕ್ ನಾಯ್ಕ (20) ಎಂಬಾತನನ್ನು ಬಂಧಿಸಿದೆ. ಕೃತ್ಯದಲ್ಲಿ ಕಾನೂನು ಸಂಘರ್ಷ ಕ್ಕೊಳಗಾಗಿರುವ ಮೂವರು ಬಾಲಕರು 3 ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ವಿವರಿಸಿದರು.
ಇವರಲ್ಲಿ ಇಬ್ಬರು ಬಾಲಕರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿ ತನಿಖೆ ಕೈಗೊಂಡಿದ್ದು, ಇನ್ನೋರ್ವ ಬಾಲಕನ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಹೇಳಿದರು. ತನಿಖಾ ತಂಡದ ಉತ್ತಮ ಕಾರ್ಯ ನಿರ್ವಹಿಸಿದೆ ಎಂದು ಇದೇ ವೇಲೆ ಶ್ರೀನಿವಾಸ್ಗೌಡ ಪ್ರಶಂಸಿಸಿದರು.
ಅನ್ಯ ಕೋಮಿನವರು ಮಾಡಿಲ್ಲ:
ಆರೋಪಿಗಳು ನಿತ್ಯವೂ ಕಲ್ಯಾಣಿಗೆ ಈಜಲು ಬರುತ್ತಿದ್ದರು.ಇದಕ್ಕೆ ಅಡ್ಡಿಪಡಿಸಿದ ಕೆಲಸಗಾರರ ಮೇಲೆ ಹಿಂದೆ ಜಗಳ ನಡೆದಿತ್ತು. ಎರಡೂ ಕಡೆಯವರ ನಡುವೆ ಮಾತಿಗೆ ಮಾತು ಸಹ ಬೆಳೆದಿತ್ತು. ಅದೇ ಸಿಟ್ಟಿನಿಂದ ನಾಲ್ವರು ಸೇರಿ ವಿಗ್ರಹ ವಿರೂಪ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮ್ಯೂಸಿಯಂ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಊಟಕ್ಕೆ ಹೋಗಿದ್ದರು.ಇದೇ ಸಮಯದಲ್ಲಿ ಆರೋಪಿಗಳು ಕೃತ್ಯ ಎಸಗಿ ಪರಾರಿಯಾಗಿದ್ದರು. ಅನ್ಯ ಕೋಮಿನವರು ಅಥವಾ ಧರ್ಮೀಯರು ಈ ಕೃತ್ತ ಎಸಗಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ಬಂಧಿತರಲ್ಲಿ ಮೂವರು ಪಿಯುಸಿ ಓದುತ್ತಿದ್ದಾರೆ ಎಂದು ಎಸ್ಪಿ ಆರ್.ಶ್ರೀನಿವಾಸ್ ಗೌಡ ಸ್ಪಷ್ಟನೆ ನೀಡಿದ್ದಾರೆ.