ಭೋಪಾಲ್: ಜೈಲು ಅಧಿಕಾರಿಗಳಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ವಿಚಾರಣಾಧೀನ ಕೈದಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಬಂಧಿತ 4 ಸಿಮಿ ಕಾರ್ಯಕರ್ತರಿಗೆ ಸುಪ್ರೀಮ್ ಕೋರ್ಟ್ ಜಾಮೀನು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೇಲಿನ ಆರೋಪಿಗಳನ್ನು 2013 ರಲ್ಲಿ ಬಂಧಿಸಲಾಗಿತ್ತು.
ಸುಪ್ರೀಮ್ ಕೋರ್ಟ್ ಸಿಮಿ ಕಾರ್ಯಕರ್ತರಿಗೆ ಜಾಮೀನು ಮಂಜೂರು ಮಾಡಿರುವ ವಿರುದ್ಧ ಮಧ್ಯಪ್ರದೇಶ ಎ.ಟಿ.ಎಸ್ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಶೋಲಾಪುರ ಜಿಲ್ಲೆಯ ನಿವಾಸಿಗಳಾದ ಸಿದ್ದೀಕ್, ಇಸ್ಮಾಯಿಲ್ ಮಾಶಾಲ್ಕರ್, ಉಮರ್ ದಂಡೋತಿ ಮತ್ತು ಇರ್ಫಾನ್ ಎಂಬವರನ್ನು ಬಂಧಿಸಿತ್ತು. ಆರೋಪಿಗಳ ವಿರುದ್ಧ ನ್ಯಾಯಾಂಗ ಬಂಧನ ವಿಸ್ತರಿಸಲು ಯಾವುದೇ ಅಂಶಗಳು ಕಂಡು ಬಾರದ ಹಿನ್ನೆಲೆಯಲ್ಲಿ ಸುಪ್ರೀಮ್ ಕೋರ್ಟ್ ಜಾಮೀನು ನೀಡಿದೆ.
2013 ರಲ್ಲಿ ಖಾಂಡ್ವಾ ಜೈಲಿನ ಕೋಣೆಯನ್ನು ಮುರಿದು ಅಧಿಕಾರಿಗಳಿಗೆ ಹಲ್ಲೆ ನಡೆಸಿ ಪರಾರಿಯಾದವರಿಗೆ ಆಶ್ರಯ ನೀಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು. ಮಾತ್ರವಲ್ಲ ಇವರ ವಿರುದ್ಧ ಯುಎಪಿಎ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆಯತ್ನ, ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿತ್ತು.