ಮೈಸೂರು : ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಮಾಜಿ ಸ್ಪೀಕರ್ ಕೃಷ್ಣ ಇಂದು ಮೈಸೂರಿನ ಕುವೆಂಪು ನಗರದ ಅನಿಕೇತನ ರಸ್ತೆಯಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ.
ಆಸ್ಪತ್ರೆಯಲ್ಲಿ ಲಿವರ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣ ಅವರು ಚಿಕಿತ್ಸೆಗೆ ಸ್ಪಂದಿಸದ ಕಾರಣ ಮನೆಗೆ ಕರೆತಂದು ಚಿಕಿತ್ಸೆ ಮುಂದುವರೆಸಲಾಗಿತ್ತು ಎನ್ನಲಾಗಿದೆ.
2006 ರಿಂದ 2008ರವೆರಗೆ ವಿಧಾನಸಭೆಯ ಸ್ಪೀಕರ್ ಆಗಿದ್ದ ಅವರು ಮೂರು ಬಾರಿ ಕೆ ಆರ್ ಪೇಟೆಯಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದರು. 1996ರಲ್ಲಿ ಮಂಡ್ಯದಿಂದ ಲೋಕ ಸಭೆಗೆ ಆಯ್ಕೆಯಾಗಿದ್ದರು. ನಂತರ ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರಿದ್ದರು.
ಕೆ ಆರ್ ಪೇಟೆ ಕೃಷ್ಣ ಎಂದೇ ಪ್ರಚಲಿತದಲ್ಲಿದ್ದ ಮಾಜಿ ಸ್ಪೀಕರ್ ಅವರು ಜನತಾ ಪರಿವಾರದಲ್ಲಿ ನಿರಂತರವಾಗಿ ಗುರುತಿಸಿಕೊಂಡು ಬಂದವರು. ಶಾಸಕರಾಗಿ ಮೂರು ಬಾರಿ ಗೆದ್ದಿದ್ದರೂ ಅವರಿಗೆ ಕೆ ಆರ್ ಪೇಟೆಯಲ್ಲಿ ಸ್ವಂತ ಮನೆಯಿರಲಿಲ್ಲ.
ಕೆ ಆರ್ ಪೇಟೆಯಲ್ಲಿ ಬಾಂಬೆ ನಾರಾಯಣ ಗೌಡರಿಗೆ ಟಿಕೇಟ್ ನೀಡಿದ ಪರಿಣಾಮ ಕೃಷ್ಣ ಅವರು ರಾಜಕಾರಣದ ಹಿನ್ನೆಲೆಗೆ ಸರಿದರೂ ಹಿರಿಯರಾದ ಹೆಚ್ಎಸ್ ದೊರೆಸ್ವಾಮಿ, ಎ ಟಿ ರಾಮಸ್ವಾಮಿ ಅವರೊಂದಿಗೆ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.