ಮದನಪಲ್ಲಿ : ಮಾಟ, ಮಂತ್ರ, ಮೂಢನಂಬಿಕೆಗಳಿಗೆ ಅನಕ್ಷರಸ್ಥರು ಬಲಿಯಾಗುತ್ತಾರೆ ಎನ್ನಲಾಗುತಿತ್ತು. ಆದರೆ, ಈಗಿನ ಶಿಕ್ಷಣ ಪದ್ಧತಿ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ವಿದ್ಯಾವಂತರೂ ಯಾವ ಮಟ್ಟಿಗೆ ಮೂಢನಂಬಿಕೆಗೆ ಬಲಿಯಾಗಿದ್ದಾರೆಂದರೆ, ಈ ಸುದ್ದಿಯನ್ನು ಕೇಳಿದರೆ ನೀವೇ ಆಘಾತಕ್ಕೊಳಗಾಗುತ್ತೀರಿ. ಮೂಢನಂಬಿಕೆಗೆ ಬಲಿಯಾಗಿ, ವಿದ್ಯಾರ್ಥಿಗಳಿಗೆ ಬೋಧಿಸುವ ಒಂದು ಕಾಲೇಜಿನ ಪ್ರಾಂಶುಪಾಲ ಮತ್ತು ಆತನ ಪತ್ನಿ ತಮ್ಮ ಮಕ್ಕಳನ್ನೇ ಬಲಿ ನೀಡಿರುವ ಘಟನೆ ವರದಿಯಾಗಿದೆ.
ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ. ಮಂತ್ರವಾದಿಯ ಮಾತನ್ನು ಕೇಳಿ ಪ್ರಾಂಶುಪಾಲ ಹಾಗೂ ಆತನ ಪತ್ನಿ ತಮ್ಮ ವಯಸ್ಸಿಗೆ ಬಂದ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ ನಾಯ್ಡು ಎಂಬಾತ ಹಾಗೂ ಆತನ ಪತ್ನಿ ತಮ್ಮದೇ ಮಕ್ಕಳಾದ 22ರ ಹರೆಯದ ಅಲೈಖ್ಯಾ ಮತ್ತು 27ರ ಹರೆಯದ ಸಾಯಿ ದಿವ್ಯಾರನ್ನು ಮೌಢ್ಯಕ್ಕೊಳಗಾಗಿ ಬಲಿ ನೀಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮೃತದೇಹ ನಗ್ನವಾಗಿ ಸಿಕ್ಕಿದೆ. ಮಕ್ಕಳನ್ನು ಬೆತ್ತಲೆಗೊಳಿಸಿ, ಪೂಜೆ ಮಾಡಿ, ನಂತರ ಡಂಬಲ್ಸ್ ನಿಂದ ಹೊಡೆದು ಸಾಯಿಸಲಾಗಿದೆ.
ಮದನಪಲ್ಲಿ ಶಿವಾಲಯಂ ದೇವಾಲಯದ ರಸ್ತೆ ಬಳಿ ಘಟನೆ ನಡೆದಿದೆ. ಪೊಲೀಸರು ಬಂದು ವಿಚಾರಿಸಿದಾಗ, ಮಕ್ಕಳು ಮೃತಪಟ್ಟಿಲ್ಲ, ಅವರನ್ನು ಮುಟ್ಟಬೇಡಿ, ನಾಳೆ ಜೀವ ಬರುತ್ತದೆ ಎಂದು ಪ್ರಾಂಶುಪಾಲನ ಪತ್ನಿ ಹೇಳಿರುವುದಾಗಿ ವರದಿಯಾಗಿದೆ. ಸ್ವಾಮಿಯೊಬ್ಬನ ಮಾತು ನಂಬಿ ಇಂತಹ ಕೃತ್ಯ ಎಸಗಿರುವುದಾಗಿ ಪೊಲೀಸರಿಗೆ ತಿಳಿದುಬಂದಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.