ನವದೆಹಲಿ: ಪಾಕಿಸ್ತಾನದ ಪತ್ರಕರ್ತೆಯೊಂದಿಗೆ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಭಾವಚಿತ್ರವನ್ನು ಬಿಡುಗಡೆಗೊಳಿಸಿರುವ ಬಿಜೆಪಿ, ಅನ್ಸಾರಿ ವಿರುದ್ಧ ಟೀಕಾಪ್ರಹಾರ ಮಾಡಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, 2009 ರಲ್ಲಿ ಇಲ್ಲಿ ನಡೆದ ಭಯೋತ್ಪಾದನೆ ಕುರಿತ ಸಮಾವೇಶದಲ್ಲಿ ಹಮೀದ್ ಅನ್ಸಾರಿ ಅವರು ನುಸ್ರತ್ ಮಿರ್ಜಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವ ಚಿತ್ರವನ್ನು ಪ್ರದರ್ಶನ ಮಾಡಿದರು.
ಬಳಿಕ ಪಾಕಿಸ್ತಾನದ ಪತ್ರಕರ್ತೆ ನುಸ್ರತ್ ಮಿರ್ಜಾ ಅವರು ಯುಪಿಎ ಆಡಳಿತಾವಧಿಯಲ್ಲಿ ಐದು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು ಮತ್ತು ಇಲ್ಲಿ ಸಂಗ್ರಹಿಸಿದ ಸೂಕ್ಷ್ಮ ಮಾಹಿತಿಯನ್ನು ತಮ್ಮ ದೇಶದ ಬೇಹುಗಾರಿಕಾ ಸಂಸ್ಥೆ ಐಎಸ್ಐಗೆ ರವಾನಿಸಿದ್ದರು ಎಂದು ಆರೋಪಿಸಿದ್ದಾರೆ.
ಆದರೆ ಹಮೀದ್ ಅನ್ಸಾರಿ ಅವರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಭಯೋತ್ಪಾದನೆ ಕುರಿತ ಸಮಾವೇಶದಲ್ಲಿ ಜಾಗತಿಕ ಗಣ್ಯ ವ್ಯಕ್ತಿಗಳು, ಪತ್ರಕರ್ತರು ಪಾಲ್ಗೊಂಡಿದ್ದರು. ನಾನಾಗಿ ಯಾರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಸರ್ಕಾರದ ಮಟ್ಟದಲ್ಲೇ ಕಾರ್ಯಕ್ರಮ ನಡೆದಿದೆ. ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಅಡಗಿಲ್ಲ. ಎಲ್ಲವೂ ಪಾರದರ್ಶಕವಾಗಿಯೇ ನಡೆದಿದೆ ಎಂದು ಸ್ಪಷ್ಟನೆ ನೀಡಿದ್ದರು.
ಸರ್ಕಾರದ ಸಲಹೆಯ ಮೇರೆಗೆ ಮಾತ್ರ ವಿದೇಶಿ ತಜ್ಞರನ್ನು ಕರೆಯಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕಾರ್ಯಕ್ರಮಕ್ಕೆ ಆಹ್ವಾನ ನೀಡುವವರ ಪಟ್ಟಿಯನ್ನು ಸಂಘಟಕರು ಸಿದ್ಧಪಡಿಸಿ ಅವರೇ ಆಹ್ವಾನ ನೀಡಿರುತ್ತಾರೆ. ನಾನು ಯಾರನ್ನೂ ವೈಯಕ್ತಿಕವಾಗಿ ಕರೆದಿಲ್ಲ ಅಥವಾ ಭೇಟಿಯಾಗಿಲ್ಲ ಎಂದು ಹಮೀದ್ ಅನ್ಸಾರಿ ಸ್ಪಷ್ಟನೆ ನೀಡಿದ್ದಾರೆ.