ಹಾಸನ: ಜಮ್ಮು-ಕಾಶ್ಮೀರಕ್ಕೆ ಆರ್ಟಿಕಲ್ 370 ಅಡಿ ನೀಡಲಾಗಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ನಿರ್ಧಾರವನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸ್ವಾಗತಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಆರ್ಟಿಕಲ್ 370 ಮೂಲಕ ಕಾಶ್ಮೀರಕ್ಕೆ ವಿಶೇಷ ಸವಲತ್ತು ಕಲ್ಪಿಸಲಾಗಿತ್ತು. ಅದನ್ನು ಲೋಕಸಭೆ, ರಾಜ್ಯಸಭೆಯಲ್ಲಿ ತಿದ್ದುಪಡಿ ಮಾಡುವ ಮುಖೇನಾ ಆ ಸವಲತ್ತು ರದ್ದು ಮಾಡಿದ್ದರು. ಇದರಿಂದ ಬೇರೆ ರಾಜ್ಯಗಳಿಗೂ, ಅನ್ಯಾಯ, ಅನಕೂಲವಾಗುತ್ತೋ ಅದು ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತೆ ಎಂದು ನುಡಿದರು.ಐದು ಜನ ನ್ಯಾಯಾಧೀಶರು ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಕೊಟ್ಟಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಇಂಡಿಯಾ ಒಂದು ಕಡೆ, ಇನ್ನೊಂದು ಕಡೆ ಎನ್ ಡಿಎ ಇದೆ. ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಈ ರಾಷ್ಟ್ರದ ಮಹಾಜನತೆ ಇಂಡಿಯಾ ಪರ ತೀರ್ಪು ಕೊಡುತ್ತಾರೋ, ಎನ್ಡಿಎ ಮೈತ್ರಿಕೂಟಕ್ಕೆ ತೀರ್ಪು ಕೊಡ್ತಾರೋ ಕಾದುನೋಡಬೇಕು ಎಂದು ಹೇಳಿದರು.