ನವದೆಹಲಿ: ತಿಹಾರ್ ಜೈಲಿನಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಮಾಜಿ ಅಧ್ಯಕ್ಷ ಇ. ಅಬೂಬಕ್ಕರ್ ಅವರನ್ನು ದೆಹಲಿಯ ಏಮ್ಸ್’ಗೆ ಸ್ಥಳಾಂತರಿಸಲಾಗಿದೆ.
ಅಬೂಬಕ್ಕರ್ ಅವರಿಗೆ ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿವೆ ಎಂಬ ಆಧಾರದ ಮೇಲೆ ಪಟಿಯಾಲದ ವಿಶೇಷ ಎನ್ ಐಎ ನ್ಯಾಯಾಲಯವು ಅವರಿಗೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದು, ತುರ್ತು ಚಿಕಿತ್ಸೆ ಅಗತ್ಯವಿರುವುದನ್ನ ಪರಿಗಣಿಸಿ ತಪಾಸಣೆಗಾಗಿ ಏಮ್ಸ್ ಗೆ ಸ್ಥಳಾಂತರಿಸುವಂತೆ ಆದೇಶಿಸಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸ್ಥಾಪಕ ಅಧ್ಯಕ್ಷರಾಗಿರುವ 70 ವರ್ಷ ಪ್ರಾಯದ ಇ ಅಬೂಬಕ್ಕರ್ ಅವರು ಮೂರು ವರ್ಷಗಳಿಂದ ಕ್ಯಾನ್ಸರ್, ಪಾರ್ಕಿನ್ಸನ್, ಮಧುಮೇಹ ಮತ್ತು ಜ್ಞಾಪಕ ಶಕ್ತಿ ನಷ್ಟದ ಖಾಯಿಲೆ ಸೇರಿದಂತೆ ವಿವಿಧ ವೃದ್ಧಾಪ್ಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿತ್ತು. ನಿಷೇಧದ ಬೆನ್ನಲ್ಲೇ ಎನ್’ಐಎ ಅಧಿಕಾರಿಗಳು ಅಬೂಬಕ್ಕರ್ ಅವರ ಮನೆಗೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದಾಗ ಅವರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಜೀವಕ್ಕೆ ಅಪಾಯವಿದೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದರು.
2020 ರಲ್ಲಿ ಕ್ಯಾನ್ಸರ್’ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಇ ಅಬೂಬಕ್ಕರ್ ಅವರು ತನ್ನ ಕುಟುಂಬ ಸದಸ್ಯರ ಆರೈಕೆಯಲ್ಲಿ ಮನೆಯಲ್ಲಿದ್ದರು. ಅವರು ತಿಹಾರ್ ಜೈಲಿನ ನೆಲದ ಮೇಲೆ ಮಲಗುತ್ತಿದ್ದು, ನಿದ್ರೆ ಮಾಡಲು ಸಹ ಹೆಣಗಾಡುತ್ತಿರುವುದರಿಂದ ಅವರ ಜೀವಕ್ಕೆ ಅಪಾಯವಿದೆ ಎಂದು ಅವರ ಕುಟುಂಬ ಕಳವಳ ವ್ಯಕ್ತಪಡಿಸಿತ್ತು.