ಮಂಡ್ಯ: ಚಿತ್ರನಟಿ, ಮಾಜಿ ಸಂಸದೆ ರಮ್ಯಾ ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಮತದಾನ ಮಾಡಿಲ್ಲ ಎಂದು ತಿಳಿದು ಬಂದಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಮಂಡ್ಯದಿಂದ ರಮ್ಯಾ ಅಂತರ ಕಾಯ್ದುಕೊಂಡಿದ್ದರು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 2023ರ ಮೇ 2ರಂದು ಮಂಡ್ಯದಲ್ಲಿ ನಡೆದ ಬಹಿರಂಗ ಪ್ರಚಾರ ಮತ್ತು ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಕಾಂಗ್ರೆಸ್‌ಗೆ ಮತ ನೀಡುವಂತೆ ಭಾಷಣ ಮಾಡಿ ಹೋಗಿದ್ದರು. ನಂತರ ಅವರನ್ನು ಮಂಡ್ಯದಲ್ಲಿ ಕಾಣಲೇ ಇಲ್ಲ.
2013ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ರಮ್ಯಾ ಸಂಸದೆಯಾಗಿ ಆಯ್ಕೆಯಾಗಿದ್ದರು. ಆದರೆ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಸ್ ಪುಟ್ಟರಾಜು ಎದುರು ಸೋಲು ಕಂಡಿದ್ದರು. ಬಳಿಕ ಮಂಡ್ಯದಿಂದ ಅಂತರ ಕಾಯ್ದುಕೊಂಡ ರಮ್ಯಾ, ಹಿಂದಿನ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಮತಗಟ್ಟೆ ಸಮೀಪ ಸುಳಿದಿಲ್ಲ. ಈ ಬಾರಿಯೂ ಅದನ್ನು ಮುಂದುವರೆಸಿದ್ದಾರೆ.