ಜಪಾನ್: ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಮೇಲೆ ನಾರಾ ನಗರದಲ್ಲಿ ಭಾಷಣ ಮಾಡುವಾಗಲೇ ಗುಂಡಿಕ್ಕಿರುವ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾಷಣ ಮಾಡುವಾಗ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ನಾರಾ ನಗರದಲ್ಲಿ ಗುಂಡಿಕ್ಕಲಾಗಿದೆ, ಸದ್ಯ ಶಂಕಿತ ಹಂತಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಪಾನ್ ನ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಖ್ಯ ಸಂಪುಟ ಕಾರ್ಯದರ್ಶಿ ಹಿರೋಕಜು ಮತ್ಸುನೋ ಮಾತನಾಡಿ, ಶೀಜೋ ಅವರ ಆರೋಗ್ಯ ಸ್ಥಿತಿ ತಿಳಿದು ಬಂದಿಲ್ಲ. ಅಂಥ ಬರ್ಬರ ಕೃತ್ಯವನ್ನು ಸಹಿಸಲಾಗದು ಎಂದು ಹೇಳಿದರು.
ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಶಿಂಜೋ ಅವರು ಹೃದಯದ ಪಲ್ಮನರಿ ಆಘಾತಕ್ಕೆ ಒಳಗಾಗಿದ್ದರು ಎಂದು ನಾರಾ ಅಗ್ನಿಶಾಮಕ ದಳದವರು ತಿಳಿಸಿದ್ದಾರೆ.
ಗುಂಡು ದಾಳಿ ಹೇಗಾಯಿತು?
ಈ ಘಟನೆಯು ಜಪಾನಿನ ಬೆಳಿಗ್ಗೆ 11:30 ಭಾರತೀಯ ಕಾಲಮಾನ 8:30ಕ್ಕೆ ನಡೆದಿದೆ. ಜಪಾನ್ ಸಂಸತ್ತಿನ ಮೇಲ್ಮನೆಗೆ ಭಾನುವಾರ ನಡೆಯಲಿರುವ ಚುನಾವಣೆಗೆ ಅವರು ನಾರಾ ರೈಲು ನಿಲ್ದಾಣದ ಹೊರಗೆ ರಸ್ತೆಯಲ್ಲಿ ಪ್ರಚಾರ ಭಾಷಣ ಮಾಡುವಾಗ ಈ ದುರ್ಘಟನೆ ನಡೆದಿದೆ.
ಎನ್ಎಚ್ ಕೆ ವರದಿಗಾರರು ಮತ್ತು ಮತ್ತೊಬ್ಬ ಘಟನೆಗೆ ನೇರ ಸಾಕ್ಷಿಯಾಗಿದ್ದಾರೆ. ಮೊದಲು ಹಾರಿಸಿದ ಗುಂಡು ಯಾರಿಗೂ ತಗುಲಿಲ್ಲ. ಎರಡನೆಯ ಗುಂಡಿಗೆ ಮಾಜಿ ಪ್ರಧಾನಿ ಅಬೆ ರಕ್ತ ಸುರಿಸುತ್ತ ಬಿದ್ದುದನ್ನು ನೋಡಿದೆ ಎಂದು ಮಹಿಳೆ ಹೇಳಿದ್ದಾರೆ.
ಶಿಂಜೋ ಅವರ ಎದೆಯ ಎಡ ಭಾಗ ಮತ್ತು ಕುತ್ತಿಗೆಯ ಬಳಿ ಗುಂಡು ತಾಗಿದೆ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಸಂಶಯಿತ ಯಾರು?
ನಾರಾ ನಗರ ನಿವಾಸಿ 41ರ ಪ್ರಾಯದ ತೆತ್ಸು ಯಾಮಗಾಮಿಯನ್ನು ಸಂದೇಹದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಹೇಳಿಕೆಯನ್ನು ಉಲ್ಲೇಖಿಸಿ ಜಪಾನ್ ಸುದ್ದಿ ಸಂಸ್ಥೆ ಎನ್ ಎಚ್ ಕೆ ವರದಿ ಮಾಡಿದೆ.
ಬಂಧಿತನು ಮಾಜಿ ಮಿಲಿಟರಿ ಸಿಬ್ಬಂದಿ, ನೌಕಾ ಪಡೆಯ ರಕ್ಷಣಾ ಪಡೆಯಲ್ಲಿದ್ದ ಎಂದು ಫ್ಯೂಜಿ ಟೀವಿ ವರದಿ ಮಾಡಿದೆ.
ಗುಂಡು ಹಾರಿಸಿದಾತನು ತಪ್ಪಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಗುಂಡು ಹಾರಿಸಿದ ಬಳಿಕ ಗನ್ ಕೆಳಗಿಟ್ಟು ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸುವವರೆಗೆ ಅಲ್ಲೇ ನಿಂತಿದ್ದ ಎಂದು ಎನ್ಎಚ್ ಕೆ ತಿಳಿಸಿದೆ.
ಹಾಲಿ ಪ್ರಧಾನಿ ಫ್ಯೂಮಿಯೋ ಕಿಶಿಡಾ ಘಟನೆಯನ್ನು ಖಂಡಿಸಿದ್ದು, ಇದು ಮೃಗೀಯತೆ ಎಂದು ಹೇಳಿದರು.
ಪ್ರಧಾನಿ ಮೋದಿಯವರು ಟ್ವಿಟರ್ ನಲ್ಲಿ “ತುಂಬ ನೋವಾಗಿದೆ, ನಮ್ಮ ಪ್ರಾರ್ಥನೆ ಅವರೊಂದಿಗಿರುತ್ತದೆ” ಎಂದು ಹೇಳಿದ್ದಾರೆ.
ಅಮೆರಿಕದ ರಾಯಭಾರಿ ರೇಮ್ ಇಮ್ಯಾನುವೇಲ್ “ಯುಎಸ್ಎ ದಿಗ್ಭ್ರಮೆಗೊಂಡಿದೆ, ವಿಷಾದ ಹೊಂದಿದೆ” ಎಂದು ಹೇಳಿದರು. ಶಿಂಜೋ ಅವರು ಅಮರಿಕದ ಅತ್ಯುತ್ತಮ ಮಿತ್ರರಾಗಿದ್ದರು ಮತ್ತು ಅಮೆರಿಕದ ಎಲ್ಲರೂ ಅವರಿಗಾಗಿ, ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ ಎಂದೂ ಇಮ್ಯಾನುವೇಲ್ ಹೇಳಿದರು.
ರಾಜಕೀಯ ಕುಟುಂಬ ಹಿನ್ನೆಲೆಯ ಶಿಂಜೋ ಅವರು 2020ರಲ್ಲಿ ಮತ್ತೆ ಕಾಡಿದ ಕಾಯಿಲೆಯ ಕಾರಣಕ್ಕೆ ರಾಜೀನಾಮೆ ನೀಡುವಾಗ ಅತಿ ದೀರ್ಘ ಕಾಲ ಪ್ರಧಾನಿಯಾಗಿದ್ದವರಾಗಿದ್ದರು. ಭಾರತದೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದ ಅವರು 2006, 2014, 2015, 2017ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.