ಗುಂಡೇಟಿಗೆ ಒಳಗಾಗಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಮೃತ್ಯು

Prasthutha|

ಟೋಕಿಯೊ: ಗುಂಡೇಟಿಗೆ ಒಳಗಾಗಿದ್ದ ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆ ಮೃತಪಟ್ಟಿದ್ದಾರೆ.

- Advertisement -


ಗುಂಡೇಟಿನಿಂದ ತೀವ್ರ ಗಾಯಗೊಂಡ ಶಿಂಜೊ ಅಬೆ ಹೃದಯ ಉಸಿರಾಟ ಸ್ತಂಭನಕ್ಕೊಳಗಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಎಂದು ಜಪಾನ್ ನ ಸ್ಥಳೀಯ ಮಾಧ್ಯಮ ಹಾಗೂ ರಾಷ್ಟ್ರೀಯ ಸುದ್ದಿವಾಹಿನಿ ಎನ್ ಹೆಚ್ ಕೆ ಮತ್ತು ಕ್ಯೊಡೊ ನ್ಯೂಸ್ ಸಂಸ್ಥೆ ವರದಿ ಮಾಡಿದೆ.

ಗುಂಡು ಹಾರಿಸಿದ ನಾರಾ ನಗರ ನಿವಾಸಿ 41ರ ಪ್ರಾಯದ ತೆತ್ಸು ಯಾಮಗಾಮಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಹೇಳಿಕೆಯನ್ನು ಉಲ್ಲೇಖಿಸಿ ಜಪಾನ್ ಸುದ್ದಿ ಸಂಸ್ಥೆ ಎನ್ ಎಚ್ ಕೆ ವರದಿ ಮಾಡಿದೆ.

- Advertisement -

ಬಂಧಿತನು ಮಾಜಿ ಮಿಲಿಟರಿ ಸಿಬ್ಬಂದಿ, ನೌಕಾ ಪಡೆಯ ರಕ್ಷಣಾ ಪಡೆಯಲ್ಲಿದ್ದ ಎಂದು ಫ್ಯೂಜಿ ಟೀವಿ ವರದಿ ಮಾಡಿದೆ.

ಗುಂಡು ಹಾರಿಸಿದಾತನು ತಪ್ಪಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಗುಂಡು ಹಾರಿಸಿದ ಬಳಿಕ ಗನ್ ಕೆಳಗಿಟ್ಟು ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸುವವರೆಗೆ ಅಲ್ಲೇ ನಿಂತಿದ್ದ ಎಂದು ಎನ್ಎಚ್ ಕೆ ತಿಳಿಸಿದೆ.

ಹಾಲಿ ಪ್ರಧಾನಿ ಫ್ಯೂಮಿಯೋ ಕಿಶಿಡಾ ಘಟನೆಯನ್ನು ಖಂಡಿಸಿದ್ದು, ಇದು ಮೃಗೀಯತೆ ಎಂದು ಹೇಳಿದರು.

ಅಮೆರಿಕದ ರಾಯಭಾರಿ ರೇಮ್ ಇಮ್ಯಾನುವೇಲ್ “ಯುಎಸ್ಎ ದಿಗ್ಭ್ರಮೆಗೊಂಡಿದೆ, ವಿಷಾದ ಹೊಂದಿದೆ” ಎಂದು ಹೇಳಿದರು. ಶಿಂಜೋ ಅವರು ಅಮರಿಕದ ಅತ್ಯುತ್ತಮ ಮಿತ್ರರಾಗಿದ್ದರು ಮತ್ತು ಅಮೆರಿಕದ ಎಲ್ಲರೂ ಅವರಿಗಾಗಿ, ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ ಎಂದೂ ಇಮ್ಯಾನುವೇಲ್ ಹೇಳಿದರು.

ರಾಜಕೀಯ ಕುಟುಂಬ ಹಿನ್ನೆಲೆಯ ಶಿಂಜೋ ಅವರು 2020ರಲ್ಲಿ ಮತ್ತೆ ಕಾಡಿದ ಕಾಯಿಲೆಯ ಕಾರಣಕ್ಕೆ ರಾಜೀನಾಮೆ ನೀಡುವಾಗ ಅತಿ ದೀರ್ಘ ಕಾಲ ಪ್ರಧಾನಿಯಾಗಿದ್ದವರಾಗಿದ್ದರು. ಭಾರತದೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದ ಅವರು 2006, 2014, 2015, 2017ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. 



Join Whatsapp