ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಸಹೋದರ ಸ್ನೇಹಶಿಸ್ ಗಂಗೋಪಾಧ್ಯಾಯ ಅವರಿಗೆ 24 ಗಂಟೆಗಳ ಒಳಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. ವಿಶ್ವಕಪ್ ಪಂದ್ಯದ ಟಿಕೆಟ್‌ಗಳ ಬ್ಲಾಕ್ ಮಾರ್ಕೆಟಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಕರೆಸಿದ್ದಾರೆ.
ನವೆಂಬರ್ 5, ಭಾನುವಾರದಂದು ಈಡನ್ ಗಾರ್ಡನ್ಸ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯಲಿದೆ. ಪೊಲೀಸರು ಬುಧವಾರದಿಂದ ವಿವಿಧ ಪ್ರದೇಶಗಳಲ್ಲಿ ದಾಳಿಗಳನ್ನು ನಡೆಸುತ್ತಿದ್ದಾರೆ ಮತ್ತು ಅಕ್ರಮ ವ್ಯವಹಾರಗಳನ್ನು ಪತ್ತೆಹಚ್ಚಲು ಸಾಮಾಜಿಕ ಮಾಧ್ಯಮಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಈಗಾಗಲೇ ಭಾರತ-ದಕ್ಷಿಣ ಆಫ್ರಿಕಾ ನಡುವಿನ 900 ರೂಪಾಯಿ ಮೌಲ್ಯದ ಪಂದ್ಯದ ಟಿಕೆಟ್‌ಗಳನ್ನು 8,000 ರೂಪಾಯಿಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ಸುಭ್ರದೀಪ್ ಭಟ್ಟಾಚಾರ್ಯ, ಸುಮನ್ ಸರ್ದರ್ ಮತ್ತು ಸಂದೀಪನ್ ಲಾಹಾ ಎಂಬ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 17 ಟಿಕೆಟ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮತ್ತು CAB ಮತ್ತು BookMyShow ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪಶ್ಚಿಮ ಬಂಗಾಳದ ಬ್ಲಾಕ್ ಮಾರ್ಕೆಟಿಂಗ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ತನಿಖೆಯ ಮುಂದುವರೆದ ಭಾಗವಾಗಿ ಮಾಜಿ ಕಪ್ತಾನ ಸೌರವ್ ಗಂಗೂಲಿ ಸಹೋದರನಿಗೆ ಸಮನ್ಸ್ ನೀಡಲಾಗಿದೆ.