ಲಂಡನ್ : ಬೋರಿಸ್ ಜಾನ್ಸನ್ ಅವರಿಂದ ತೆರವಾದ ಪ್ರಧಾನಿ ಹುದ್ದೆಗೆ ಇದೀಗ ಮತದಾನ ನಡೆಯುತ್ತಿದ್ದು ಕನ್ಸರ್ವೇಟಿವ್ ಪಕ್ಷದ ಮಾಜಿ ಚಾನ್ಸಿಲರ್, ಭಾರತ ಮೂಲದ ರಿಶಿ ಸುನಾಕ್ ಮೂರನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ.
ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಲು ಪ್ರಧಾನಿ ರೇಸ್ ನಲ್ಲಿರುವ ಅಂತಿಮ ನಾಲ್ಕು ಮಂದಿಯ ಪೈಕಿ ರಿಶಿ ಸುನಾಕ್ ಕೂಡಾ ಒಬ್ಬರು. ಕನ್ಸರ್ವೇಟಿವ್ ಪಕ್ಷದ ಸದಸ್ಯರ ನಡುವೆ ನಡೆದ ಚುನಾವಣೆಯಲ್ಲಿ ಕನಿಷ್ಠ ಮತಗಳನ್ನು ಪಡೆದ ಟಾಮ್ ಟುಗೆಂದತ್ ಸ್ಪರ್ಧೆಯಿಂದ ಹೊರಬಿದಿದ್ದಾರೆ.
ನಾಯಕತ್ವಕ್ಕಾಗಿ ನಡೆದ ಮೂರನೇ ಸುತ್ತಿನ ಮತದಾನದಲ್ಲಿ, 357 ಸಂಸದರು ಮತ ಚಲಾಯಿಸಿದರು. ರಿಶಿ ಸುನಾಕ್ ತಮ್ಮ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದ್ದು, ಎರಡನೇ ಸುತ್ತಿನಲ್ಲಿ 101 ರಿಂದ 115 ಕ್ಕೆ ತಮ್ಮ ಮತ ಹಂಚಿಕೆಯನ್ನು ಹೆಚ್ಚಿಸಿದ್ದಾರೆ. ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಮೊರ್ಡಾಂಟ್ 82 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಇದು ಕೊನೆಯ ಸುತ್ತಿಗಿಂತ ಒಂದು ಕಡಿಮೆ ಮತವಾಗಿದೆ. ಮೂರನೇ ಸ್ಥಾನದಲ್ಲಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಇದ್ದಾರೆ, ಅವರು ತಮ್ಮ ಮತ ಹಂಚಿಕೆಯನ್ನು 71 ಕ್ಕೆ ಹೆಚ್ಚಿಸಿದರು, ಮತ್ತು ಕೊನೆಯ ಸುತ್ತಿನಲ್ಲಿ 58 ಮತಗಳನ್ನು ಪಡೆದ ಕೆಮಿ ಬಡೆನೋಚ್ ಕೂಡ ಮೂರನೇ ಸ್ಥಾನದಲ್ಲಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಸಹೋದ್ಯೋಗಿಗಳಿಂದ ಮ್ಯಾಜಿಕ್ ಸಂಖ್ಯೆ ಎನಿಸಿದ 120 ಮತಗಳನ್ನು ಗಳಿಸಿದ ಅಭ್ಯರ್ಥಿ ಟೋರಿ ಸದಸ್ಯತ್ವದ ಮತದಾನಕ್ಕಾಗಿ ನಡೆಯುವ ಅಂತಿಮ ಸ್ಪರ್ಧೆಗೆ ಅರ್ಹತೆ ಪಡೆಯುವ ಇಬ್ಬರ ಪೈಕಿ ಒಬ್ಬರಾಗುತ್ತಾರೆ. ಕೊನೆಯ ಕೆಲ ಸುತ್ತಿನ ಮತದಾನ ಈ ವಾರವೇ ನಡೆಯಲಿದ್ದು ಅದರಲ್ಲೂ ರಿಷಿ ಮುನ್ನಡೆ ಸಾಧಿಸಿ ಬ್ರಿಟನ್ ಪ್ರಧಾನಿ ಗದ್ದುಗೆ ಏರುತ್ತಾರೋ ಎಂದು ದೇಶ ಕಾದು ನೋಡುತಿದೆ.