ಬೆಂಗಳೂರು : ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ಅವರು ಅಲ್ಪಸಂಖ್ಯಾತರ ಮತಗಳಿಗಾಗಿ ಹಲ್ಲುಗಿಂಜುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅವರಿಬ್ಬರೂ ಆರ್ ಎಸ್ಎದಸ್ ವಿಚಾರದಲ್ಲಿ ಆಕ್ಷೇಪಣಾರ್ಹ ಟೀಕೆ ಮಾಡುವಲ್ಲಿ ಸ್ಫರ್ಧೆಗಿಳಿದಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಿಬ್ಬರ ಉದ್ದೇಶ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಿದೆ. ಅಲ್ಪಸಂಖ್ಯಾತರ ಮತ ಪಡೆಯಲು ಅವರಿಬ್ಬರೂ ಸ್ಫರ್ಧೆಗಿಳಿದಿದ್ದಾರೆ. ಆರ್ ಎಸ್ ಎಸ್ ವಿಶ್ವದಲ್ಲಿ ಅತೀ ದೊಡ್ಡ ಸ್ವಯಂ ಸೇವಾ ಸಂಘಟನೆ ಎಂಬುದು ಅವರಿಬ್ಬರಿಗೂ ಗೊತ್ತಿದೆ ಎಂದು ತಿಳಿಸಿದರು.
ಬಿನ್ನಿ ಮಿಲ್ ಭಾಗದಲ್ಲಿ 10 ಸಾವಿರ ಪೊಲೀಸರಿಗೆ ಕ್ವಾರ್ಟರ್ಸ್ ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಈ ಕಟ್ಟಡಗಳ ನಿರ್ಮಾಣವಾದರೆ ಪೊಲೀಸರ ವಸತಿ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ ಎಂದು ತಿಳಿಸಿದ ಅವರು, ಕೆಲವೆಡೆ ಪೊಲೀಸ್ ವಸತಿ ಗೃಹಗಳು ಇದ್ದರೂ ಪೊಲೀಸರು ಅಲ್ಲಿ ವಾಸಿಸುತ್ತಿಲ್ಲ. ಎಚ್ ಆರ್ ಎ (ಬಾಡಿಗೆ ಭತ್ಯೆ) ಹೆಚ್ಚು ಪ್ರಮಾಣದಲ್ಲಿ ಸಿಗುತ್ತಿರುವುದೇ ಇದಕ್ಕೆ ಕಾರಣ ಎಂದರು.
ಹಿಂದೆ ವರ್ಷಕ್ಕೆ ಐದಾರು ಪೊಲೀಸ್ ಸ್ಟೇಷನ್ ನಿರ್ಮಿಸಲಾಗುತ್ತಿತ್ತು. ಕಳೆದೆರಡು ವರ್ಷಗಳಲ್ಲಿ 100 ಪೊಲೀಸ್ ಸ್ಟೇಷನ್ಗಳ ನಿರ್ಮಾಣಕ್ಕೆ 200 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಅವರು ವಿವರಿಸಿದರು.