ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ-ಸಿಎಎ ವಿರುದ್ಧ ನಿಲುವು ಪ್ರಕಟಿಸಿದ್ದಕ್ಕಾಗಿ ಅಸ್ಸಾಂ ಗಣ ಪರಿಷತ್ –ಎಜಿಪಿಯಿಂದ ಟಿಕೆಟ್ ನಿರಾಕರಿಸಲ್ಪಟ್ಟ ಅಸ್ಸಾಂ ಮಾಜಿ ಮುಖ್ಯಮಂತ್ರಿ ಪ್ರಫುಲ್ಲಾ ಕುಮಾರ್ ಮಹಂತಾ ಮತ್ತೊಮ್ಮೆ ಸಿಎಎ ವಿರೋಧಿ ನಿಲುವನ್ನು ಪುನರುಚ್ಚರಿಸಿದ್ದಾರೆ.
ಮಾರ್ಚ್ 27ರಿಂದ ಮೂರು ಹಂತಗಳಲ್ಲಿ ನಡೆಯುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಮಹಂತಾ ಸೇರಿ ನಾಲ್ವರು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆಗೊಂಡು ಶನಿವಾರ ದೆಹಲಿಯಿಂದ ಗುವಾಹಟಿಗೆ ಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, “ಸಿಎಎ ವಿರೋಧಿ ಶಕ್ತಿಗಳೊಂದಿಗೆ ದೃಢವಾಗಿ ನಿಲ್ಲುತ್ತೇನೆ” ಎಂದು ಪುನರುಚ್ಚರಿಸಿದ್ದಾರೆ.
ಎರಡು ಬಾರಿ ಮುಖ್ಯಮಂತ್ರಿ, ಎಜಿಪಿಯ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಮಹಾಂತ ಅವರಿಗೆ ಸಿಎಎ ವಿರುದ್ಧ ನಿಲುವು ಹೊಂದಿದ್ದ ಕಾರಣಕ್ಕೆ ಈ ಬಾರಿ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಲಾಗಿದೆ.
ನಾಗಾಂನ್ ನ ಬರ್ಹಾಂಪುರ ಕ್ಷೇತ್ರದಿಂದ 7 ಬಾರಿ ಶಾಸಕರಾಗಿರುವ ಪ್ರಫುಲ್ಲಾ ಕುಮಾರ್ ಮಹಂತಾ ಅವರನ್ನು ಎಜಿಪಿ ಟಿಕೆಟ್ ನೀಡಲ್ಪಟ್ಟ ಅಭ್ಯರ್ಥಿಗಳ ಪಟ್ಟಿಯಿಂದ ಹೊರಗಿಡಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಫುಲ್ಲಾ ಕುಮಾರ್ ಮಹಂತಾ ಮತ್ತು ಅವರ ಬೆಂಬಲಿಗರು ಈ ಹಿಂದೆ ವಿಭಜನೆಗೊಂಡಿದ್ದ ಎಜಿಪಿಯ ಮತ್ತೊಂದು ಬಣವಾದ ಅಸೋಮ್ ಗಣ ಪರಿಷತ್-ಪ್ರೋಗ್ರೆಸ್ಸಿವ್ (ಎಜಿಪಿ-ಪಿ)ಯನ್ನು ಬಲಪಡಿಸಲು ಮುಂದಾಗಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ವಿರೋಧಿಸುವ ಕೆಲವು ಮಾಜಿ ಎಜಿಪಿ ನಾಯಕರು ಎಜಿಪಿ-ಪಿ ಅನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 2008ರಲ್ಲಿ ಎಜಿಪಿ-ಪಿ ಬಣ ಎಜಿಪಿಯೊಂದಿಗೆ ವಿಲೀನಗೊಂಡಿತ್ತು. ಎಜಿಪಿಯಿಂದ ತಮ್ಮನ್ನು ಉಚ್ಚಾಟಿಸಿದ್ದಕ್ಕಾಗಿ 2005ರಲ್ಲಿ ಎರಡು ಬಾರಿಯ ಮುಖ್ಯಮಂತ್ರಿ ಪ್ರಫುಲ್ಲಾ ಕುಮಾರ್ ಮಹಾಂತ ಅವರು ಎಜಿಪಿ-ಪಿಯನ್ನು ಸ್ಥಾಪಿಸಿದ್ದರು.
ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಅಂಗೀಕಾರ ಮತ್ತು ಪ್ರಸ್ತಾಪಿತ ಅನುಷ್ಠಾನವನ್ನು ವಿರೋಧಿಸುವಲ್ಲಿ ಪ್ರಫುಲ್ಲಾ ಕುಮಾರ್ ಮಹಂತಾ ಧ್ವನಿ ಎತ್ತಿದ್ದರು. ಮಹಂತಾ ಅವರ ಸಿಎಎ ವಿರೋಧಿ ನಿಲುವಿನಿಂದಾಗಿ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ.