ಕಠ್ಮಂಡು: ನೇಪಾಳದಲ್ಲಿ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ ಮತ್ತು ನೇಪಾಳಿ ಕಾಂಗ್ರೆಸ್ ಪಕ್ಷದ ಮೈತ್ರಿ ಸರಕಾರ ಪತನಗೊಂಡಿದ್ದು ನೂತನ ಮೈತ್ರಿ ಸರಕಾರ ರಚನೆಯಾಗಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ ಮಾವೋವಾದಿ), ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್- ಯುನಿಫೈಡ್ ಮಾರ್ಕಿಸ್ಟ್ ಲೆನಿನಿಸ್ಟ್, ರಾಷ್ಟ್ರೀಯ ಸ್ವತಂತ್ರ ಪಾರ್ಟಿ ಮತ್ತು ಜನತಾ ಸಮಾಜವಾದಿ ಪಾರ್ಟಿ ಒಟ್ಟು ಸೇರಿ ಮೈತ್ರಿ ಸರಕಾರ ರಚಿಸಿಕೊಂಡಿದೆ. ಪ್ರಧಾನಿಯಾಗಿ ಪುಷ್ಪಕುಮಾರ್ ದಹಾಲ್ ಅವರೇ ಮುಂದುವರಿಯಲಿದ್ದಾರೆ.
ನೂತನ ಸಚಿವರ ಪಟ್ಟಿಯನ್ನು ನಾಲ್ಕೂ ಪಕ್ಷಗಳು ಅನುಮೋದಿಸಿದ ಬಳಿಕ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. 2022ರ ಸಾರ್ವತ್ರಿಕ ಚುನಾವಣೆಯ ಬಳಿಕ ಸಿಪಿಎನ್, ಯುಎಂಎಲ್ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿಯಾದ ದಹಾಲ್, ಮೂರು ತಿಂಗಳೊಳಗೆ ನೇಪಾಳಿ ಕಾಂಗ್ರೆಸ್ ಪಕ್ಷದ ಜತೆ ಮೈತ್ರಿಮಾಡಿಕೊಂಡು ಹೊಸ ಮೈತ್ರಿ ಸರಕಾರ ರಚಿಸಿದ್ದರು. ಸುಮಾರು 1 ವರ್ಷದ ಬಳಿಕ ಮತ್ತೆ ಸಿಪಿಎನ್, ಯುಎಂಎಲ್ ಪಕ್ಷಗಳ ಜತೆ ಸೇರಿ ದಹಾಲ್ ಮೈತ್ರಿ ಸರಕಾರ ರಚಿಸಿದ್ದಾರೆ.