ಗೀತಂ ವಿವಿಯಲ್ಲಿ ವಿದೇಶಿ ವಿದ್ಯಾರ್ಥಿನಿ ಸಾವು: ಪರಿಸ್ಥಿತಿ ಉದ್ವಿಗ್ನ

Prasthutha|

ಬೆಂಗಳೂರು: ಹಾಸ್ಟೆಲ್ ಮೇಲಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು, ವಿದ್ಯಾರ್ಥಿನಿ ಸಾವನ್ನಪ್ಪಿರುವ ದುರ್ಘಟನೆ ದೊಡ್ಡಬಳ್ಳಾಪುರ ಬಳಿಯ ಗೀತಂ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

- Advertisement -


ಗೀತಂ ವಿಶ್ವವಿದ್ಯಾಲಯದ ಬಿಬಿಎ ವಿದ್ಯಾರ್ಥಿನಿ ಉಗಾಂಡ ದೇಶದ ಹಸೀನಾ ಮೃತ ದುರ್ದೈವಿಯಾಗಿದ್ದು, ಬಟ್ಟೆ ತರಲೆಂದು ನಿನ್ನೆ ಸಂಜೆ 6ನೇ ಮಹಡಿ ಮೇಲೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ 6ನೇ ಮಹಡಿಯಿಂದ ಬಿದ್ದಿದ್ದಾರೆ ಎನ್ನಲಾಗಿದೆ.
ಹಸೀನಾ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು 1 ಗಂಟೆ ಕಳೆದರೂ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯದೆ ನಿರ್ಲಕ್ಷ್ಯ ತೋರಿಸಿದ ಹಿನ್ನೆಲೆಯಲ್ಲಿ ರೊಚ್ಚಿಗಿದ್ದ ಇತರೆ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿ ಕಾಲೇಜಿನ ಕಚೇರಿ, ಕ್ಯಾಂಟಿನ್ ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಣಾಮ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ವಿದ್ಯಾರ್ಥಿನಿ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಡಿವೈಎಸ್ಪಿ ನಾಗರಾಜ್, ಇನ್ ಸ್ಪೆಕ್ಟರ್ ಸತೀಶ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.


ಮೂರು ದಿನಗಳ ಹಿಂದಷ್ಟೇ ಐಪಿಎಲ್ ನ ರೈಸರ್ಸ್ ಹೈದರಾಬಾದ್ ಮತ್ತು ಆರ್ ಸಿಬಿ ನಡುವಿನ ಪಂದ್ಯದಲ್ಲಿ ಆರ್ ಸಿಬಿ ಆಲ್ ಔಟ್ ಆಗಿದ್ದ ಕಾರಣ ಕಾಲೇಜಿನ ವಿದ್ಯಾರ್ಥಿಗಳು ವಾಟ್ಸ್ ಆಪ್ ನಲ್ಲಿ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆಂಧ್ರಪ್ರದೇಶ ವಿದ್ಯಾರ್ಥಿಗಳು ಆರ್ ಸಿಬಿ ಕಪ್ ಗೆಲ್ಲಲ್ಲ ವಿಕೆಟ್ ಗಳು ಹೋಗುತ್ತಿವೆ ಎಂದು ಕಮೇಂಟ್ ಮಾಡಿ ಅಪಹಾಸ್ಯ ಮಾಡಿದ್ದರು. ಹೀಗಾಗಿ ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು ಕಾಲೇಜು ಬಳಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದರು. ಇದೇ ವಿಚಾರವಾಗಿ ವಿದ್ಯಾರ್ಥಿಗಳು ಪೋಷಕರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು.

- Advertisement -


ಈ ಮಧ್ಯೆ ರಾತ್ರಿ ವಿವಿ ಕಟ್ಟಡದ 6 ನೇ ಮಹಡಿಯಿಂದ ಬಿದ್ದು ಉಗಾಂಡ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ವಿದ್ಯಾರ್ಥಿನಿ ಮೃತ ಪಟ್ಟ ಹಿನ್ನೆಲೆಯಲ್ಲಿ ಎರಡು ಕಡೆ ವಿದ್ಯಾರ್ಥಿಗಳು ಕಾಲೇಜಿನ ಗಾಜುಗಳನ್ನು ಪುಡಿ ಪುಡಿ ಮಾಡಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಕಾಲೇಜಿಗೆ ರಜೆ:
ಈ ನಡುವೆ ವಿದ್ಯಾರ್ಥಿಗಳ ಗಲಾಟೆ ಹಿನ್ನೆಲೆಯಲ್ಲಿ ಗೀತಂ ಯೂನಿವರ್ಸಿಟಿ ಕಾಲೇಜಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಕಾಲೇಜು ಆಡಳಿತ ಮಡಳಿಯಿಂದ ತರಗತಿಗಳನ್ನು ರದ್ದು ಮಾಡಲಾಗಿದ್ದು ಯೂನಿವರ್ಸಿಟಿಯ ಎಲ್ಲಾ ಪರೀಕ್ಷೆಗಳು ಸಹ ರದ್ದು ಮಾಡಿದ್ದು, ಪರೀಕ್ಷೆ ಬರೆಯಲು ಬಂದವರು ಸಹ ಮನೆಗಳಿಗೆ ವಾಪಸ್ ಹೋಗಿದ್ದಾರೆ.



Join Whatsapp