ಮುಂಬೈ: ರಿಲಾಯನ್ಸ್ ಇಂಡಿಸ್ಟ್ರೀಸ್ ಲಿಮಿಟೆಡ್ ( RIL) ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಕುಟುಂಬಕ್ಕೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಇಂದು ಕಸ್ಟಡಿಗೆ ಪಡೆದುಕೊಂಡಿದ್ದೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಮುಂಬೈನ ಗಿರಿಗಾಂವ್’ನಲ್ಲಿರುವ ರಿಲಾಯನ್ಸ್ ಫೌಂಡೇಶನ್, ಇದರ ಲ್ಯಾಂಡ್’ಲೈನ್ ಸಂಖ್ಯೆಗೆ ಅಫ್ಝಲ್ ಎಂಬಾತ ಮೂರು – ನಾಲ್ಕು ಬೆದರಿಕೆ ಕರೆಗಳನ್ನು ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೆ ಬಂದಿದ್ದ ಫೋನ್ ನಂಬರ್ ಅನ್ನು ಗುರುತಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಈತ ಮಾನಸಿಕವಾಗಿ ಅಸ್ಥಿರವಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿರುವುದಾಗಿ ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿದ ಪೊಲೀಸರು, ಬಂಧಿತನನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ.
ಕೆಳೆದ ತಿಂಗಳು ಮುಂಬೈನಲ್ಲಿರುವ ಮುಖೇಶ್ ಅಂಬಾನಿ ಮತ್ತು ಕುಟುಂಬಕ್ಕೆ ಕೇಂದ್ರ ಸರ್ಕಾರ ಭದ್ರತೆಯನ್ನು ಮುಂದುವರಿಸಬಹುದು ಎಂದು ಸುಪ್ರೀಮ್ ಕೋರ್ಟ್ ಆದೇಶ ನೀಡಿತ್ತು.
ಅಂಬಾನಿಗಳಿಗೆ ಸರ್ಕಾರ ಭದ್ರತೆಯನ್ನು ನೀಡುವುದರ ವಿರುದ್ಧ ತ್ರಿಪುರಾ ಹೈಕೋರ್ಟ್’ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅದು ಸ್ವೀಕರಿಸಿದ ಬಳಿಕ ಕೇಂದ್ರ ಸರ್ಕಾರ ಸುಪ್ರೀಮ್ ಕೋರ್ಟ್’ನ ಮೊರೆ ಹೋಗಿತ್ತು.
ಕಳೆದ ವರ್ಷ ಅಂಬಾನಿ ಅವರ ಮನೆಯ ಬಳಿ ಸ್ಫೋಟಕಗಳೊಂದಿಗೆ ಕಾರೊಂದನ್ನು ಪತ್ತೆ ಹಚ್ಚಲಾಗಿತ್ತು.