ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲೇ ಇದು ಮೂರನೇ ಬಾರಿಗೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬೇಲಾ ಎಂ ತ್ರಿವೇದಿ ಅವರನ್ನು ಒಳಗೊಂಡ ಇಬ್ಬರು ಮಹಿಳಾ ನ್ಯಾಯಾಧೀಶರ ಪೀಠವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ರಚಿಸಿದ್ದಾರೆ.
ವೈವಾಹಿಕ ಪ್ರಕರಣ ಹಾಗೂ ಜಾಮೀನು ಪ್ರಕರಣಗಳು ಸೇರಿದಂತೆ ವರ್ಗಾವಣೆಗೊಂಡ ಅರ್ಜಿಗಳ ಕುರಿತು ಈ ಪೀಠ ವಿಚಾರಣೆ ನಡೆಸಲಿದೆ. 10 ವರ್ಗಾವಣೆಗೊಂಡ ಅರ್ಜಿಗಳು, 10 ಜಾಮೀನು ಅರ್ಜಿಗಳು ಸೇರಿದಂತೆ ಒಟ್ಟು 32 ಪ್ರಕರಣಗಳು ಈ ಪೀಠದ ಮುಂದಿವೆ.
2013ರಲ್ಲಿ ಮೊದಲ ಬಾರಿಗೆ ಎಲ್ಲಾ ಮಹಿಳಾ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವನ್ನು ರಚಿಸಲಾಗಿತ್ತು. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜ್ಞಾನ್ ಸುಧಾ ಮಿಶ್ರಾ ಹಾಗೂ ರಂಜನಾ ಪ್ರಕಾಶ್ ದೇಸಾಯಿ ಇದ್ದರು. ಎರಡನೇ ಬಾರಿಗೆ 2018ರಲ್ಲಿ ರಚಿಸಲಾಯಿತು. ಇದರಲ್ಲಿ ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಇದ್ದರು.
ಸದ್ಯ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಬಿ.ವಿ. ನಾಗರತ್ನ ಹಾಗೂ ತ್ರಿವೇದಿ ಸೇರಿ ಒಟ್ಟು ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. 2027ರಲ್ಲಿ ನ್ಯಾಯಮೂರ್ತಿ ನಾಗರತ್ನ ಅವರು ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.