ಬೀದಿ ಬದಿ ವ್ಯಾಪಾರಸ್ಥರನ್ನು ಬುಲ್ಡೋಜರ್ ಬಳಸಿ ಓಡಿಸಿದ ಅದೇ ಸ್ಥಳಗಳಲ್ಲಿ ಫುಡ್ ಫೆಸ್ಟಿವಲ್: ಮುನೀರ್ ಕಾಟಿಪಳ್ಳ ಆಕ್ರೋಶ

Prasthutha|

‘ಉತ್ತರ ಭಾರತದ ಚಾಯ್ ವಾಲಾನನ್ನು ಕರೆಸಿ ದೊಡ್ಡ ಹಂಗಾಮ ಎಬ್ಬಿಸಲಾಗಿದೆ’

- Advertisement -


ಮಂಗಳೂರು: ಬೀದಿ ಬದಿ ವ್ಯಾಪಾರಸ್ಥರನ್ನು ಟೈಗರ್ ಕಾರ್ಯಾಚರಣೆ ಮೂಲಕ ಬುಲ್ಡೋಜರ್ ಬಳಸಿ ಓಡಿಸಿದ ಅದೇ ಸ್ಥಳಗಳಲ್ಲಿ ನೂರಾರು ಸ್ಟಾಲ್ ಹಾಕಿ ಫುಡ್ ಫೆಸ್ಟಿವಲ್ ಮಾಡುತ್ತಿರುವ ಬಗ್ಗೆ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಲೇಡಿಹಿಲ್ ಸುತ್ತಲು ಸಂಜೆ ಹೊತ್ತು ಟೀ, ಕಾಫಿ, ಚರುಮುರಿ, ಆಮ್ಲೆಟ್, ಫ್ರುಟ್ ಸಲಾಡ್ ವ್ಯಾಪಾರ ಮಾಡುತ್ತಿದ್ದ ಬೀದಿಬದಿ ವ್ಯಾಪಾರಸ್ಥರನ್ನು ಬಿಜೆಪಿ ಆಡಳಿತದ ಮಂಗಳೂರು ನಗರ ಪಾಲಿಕೆ ಟೈಗರ್ ಕಾರ್ಯಾಚರಣೆ ಅಂತ ಹೆಸರಿಟ್ಟು ಬುಲ್ಡೋಜರ್ ಬಳಸಿ ಕಿತ್ತು ಬಿಸಾಕಿತ್ತು. ಟ್ರಾಫಿಕ್ ಕಿರಿಕಿರಿ, ಪಾರ್ಕಿಂಗ್ ಸಮಸ್ಯೆ, ಫುಟ್ ಪಾತ್ ಅತಿಕ್ರಮಣ ತೆರವು ಅಂತ ಕುಂಟು ನೆಪಗಳನ್ನು ಬಿಜೆಪಿ ಮೇಯರ್, ಶಾಸಕರು ನೀಡಿದ್ದರು. ಮಂಗಳೂರಿನ ನಾಗರಿಕರು ಆಗ ಮೌನಕ್ಕೆ ಶರಣಾಗಿದ್ದರು.

- Advertisement -


ಈಗ ಅದೇ ಲೇಡಿಹಿಲ್ ಸುತ್ತಲು ಬಿಜೆಪಿ ಶಾಸಕರ ನೇತೃತ್ವದಲ್ಲಿ ಐದು ದಿನಗಳ ಅದ್ದೂರಿ ಫುಡ್ ಫೆಸ್ಟಿವಲ್ ನಡೆಯುತ್ತಿದೆ. ಬೀದಿ ಬದಿ ವ್ಯಾಪಾರಸ್ಥರನ್ನು ಬುಲ್ಡೋಜರ್ ಬಳಸಿ ಓಡಿಸಿದ ಅದೇ ಸ್ಥಳಗಳಲ್ಲಿ ನೂರಾರು ಸ್ಟಾಲ್ ಗಳನ್ನು ಹಾಕಲಾಗಿದೆ. (ಒಂದೊಂದು ಸ್ಟಾಲ್ ಗಳಿಗೆ ಹತ್ತಾರು ಸಾವಿರ ಬಾಡಿಗೆಯನ್ನು ಶಾಸಕರ ನೇತೃತ್ವದ ಟ್ರಸ್ಟ್ ನಿಗದಿ ಪಡಿಸಿದೆ, ನಗರ ಪಾಲಿಕೆಯ ರಸ್ತೆಗೆ ಖಾಸಗಿಯವರು ಈ ರೀತಿ ಬಾಡಿಗೆ ಪಡೆಯಲು ಯಾವ ನಿಯಮದಡಿ ಅವಕಾಶ ನೀಡಲಾಗಿದೆ ತಿಳಿಯದು) ಸಂಚಾರ ಪೂರ್ತಿ ಅಸ್ತವ್ಯಸ್ತಗೊಂಡಿದೆ. ಉದ್ಘಾಟನೆಗೆ ಅದ್ಯಾರೋ, ಉತ್ತರ ಭಾರತದ ಚಾ ವಾಲನನ್ನು (ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ) ಕರೆಸಿ ದೊಡ್ಡ ಹಂಗಾಮ ಎಬ್ಬಿಸಲಾಗಿದೆ. “ಡೀಸೆಂಟ್” ಎಂದು ಬೆನ್ನುತಟ್ಟಿಕೊಳ್ಳುವ ಮಂಗಳೂರು ನಾಗರಿಕರೂ ಹೋ… ಎಂದು ಫುಡ್ ಫೆಸ್ಟಿವಲ್ ನಲ್ಲಿ ಸೇರಿದ್ದಾರೆ. ಈಗ ಅವರ್ಯಾರಿಗೂ ಇದೇ ರಸ್ತೆಯಿಂದ ಬಡ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಿದ್ದು, ಅವರ ಬದುಕಿನ ಮೇಲೆ ಬುಲ್ಡೋಜರ್ ಹರಿದಿದ್ದು ನೆನಪಾಗಲೆ ಇಲ್ಲ. ಜನ ಮರುಳೋ, ಜಾತ್ರೆ ಮರುಳೋ…. ಎಂದು ಎಲ್ಲರೂ ನೆರೆದಿದ್ದಾರೆ. ಮಂಗಳೂರಿನಲ್ಲಿ ಇದನ್ನೆಲ್ಲ ಪ್ರಶ್ನಿಸುವವರೇ ಹುಚ್ಚರು ಎಂಬಂತೆ ಕಾಣಲಾಗುತ್ತಿದೆ ಎಂದರು.


ಇಲ್ಲಿ, ಶಾಸಕರು, ಬಲಾಢ್ಯ ಹಿಂಬಾಲಕರು ನಿಯಮ ಉಲ್ಲಂಘಿಸಿ, ರಸ್ತೆ ಸಂಚಾರ ಅಸ್ತವ್ಯಸ್ತಗೊಳಿಸಿ ಆಯೋಜಿಸಿರುವ ಫೆಸ್ಟಿವಲ್ ಅನ್ನು ಪ್ರಶ್ನಿಸದೆ, ಮಿಂದೆದ್ದು ಸಂಭ್ರಮಿಸುವ ಇದೇ ಜನ, ಬಂಟ್ವಾಳದ ಟೋಲ್ ಗೇಟ್ ನಲ್ಲಿ , ಟೋಲ್ ಲೂಟಿ ಪ್ರಶ್ನಿಸಿದ ಲಾರಿ ಚಾಲಕನೋರ್ವನ ಮೇಲೆ ಟೋಲ್ ಸಿಬ್ಬಂದಿ ಗೂಂಡಾಗಿರಿ ಮಾಡಿದ ವೀಡಿಯೋ ಹಂಚಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಘರ್ಜಿಸುತ್ತಿದ್ದಾರೆ. ಹಿಪಾಕ್ರಸಿ ಅಂದರೆ ಇದೇ ಅಲ್ಲವೆ. ಈ ಫುಡ್ ಫೆಸ್ಟಿವಲ್ ರಸ್ತೆ ಮೇಲೆ ನಡೆಯಲು ಪೊಲೀಸ್ ಕಮೀಷನರ್ ಅಗ್ರವಾಲ್ ಅನುಮತಿ ಕೊಟ್ರಾ ಅಂತ ಕೇಳ್ಬೇಡಿ, ಅವರು ಫುಡ್ ಫೆಸ್ಟಿವಲ್ ನಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಲು, ಜಾತ್ರೆಯಂತೆ ಸೇರಿರುವ ಜನರನ್ನು ನಿಭಾಯಿಸಲು ಪೊಲೀಸರನ್ನು ನಿಯೋಜಿಸಿ ಆರಾಮಾವಾಗಿದ್ದಾರೆ ಎಂದು ಹೇಳಿದ್ದಾರೆ.



Join Whatsapp