SDPI ದೂರಿನ ಬೆನ್ನಲ್ಲೇ ಗಂಗಾವತಿಯಲ್ಲಿ ಬಿಲ್ಲು, ಬಾಣಗಳಿರುವ ವಿದ್ಯುತ್ ಕಂಬ ತೆರವಿಗೆ ಆದೇಶ

Prasthutha|

ಕೊಪ್ಪಳ: ಗಂಗಾವತಿ ನಗರದ ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗೆ ಅಭಿವೃದ್ಧಿಪಡಿಸಿದ ರಸ್ತೆ ಮಧ್ಯೆ ಹಾಕಿರುವ ವಿದ್ಯುತ್ ಕಂಬಗಳ ತೆರವಿಗೆ ತಹಶೀಲ್ದಾರ್‌ ಆದೇಶಿಸಿದ್ದಾರೆ.

- Advertisement -

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ (KRIDL) ವಿರುದ್ಧವೇ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.

ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗಿನ ರಸ್ತೆ ನಗರ ಸಭೆ ವ್ಯಾಪ್ತಿಗೆ ಬರುತ್ತಿದೆ. ಇಲ್ಲಿ ಕೆಐಆರ್‌ಡಿಎಲ್‌ ಸಂಸ್ಥೆ ಸ್ಥಾಪಿಸಿದ ವಿದ್ಯುತ್‌ ಕಂಬಗಳು ಧಾರ್ಮಿಕ ಸೌಹಾರ್ದತೆ ಹಾಗೂ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ನಿರ್ಮಾಣವಾಗಿದೆ. ಇದು ನಗರದಲ್ಲಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟುಮಾಡುವ ಸಾಧ್ಯತೆಗಳು ಇರುವುದರಿಂದ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು. ಈ ಕಾಮಗಾರಿ ಕೈಗೊಂಡಿರುವ ಕೆಐಆರ್‌ಡಿಎಲ್‌ ಎಂಜಿನಿಯರ್‌ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಂಡು ವರದಿ ನೀಡುವಂತೆ ತಹಶೀಲ್ದಾರ್‌ ನಾಗರಾಜ್‌ ಅವರು ಸೂಚಿಸಿದ್ದಾರೆ.

- Advertisement -

ಏನಿದು ವಿವಾದ?
ವಿದ್ಯುತ್‌ ಕಂಬಗಳು ಧಾರ್ಮಿಕ ಸೌಹಾರ್ದತೆ ಹಾಗೂ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ನಿರ್ಮಾಣವಾಗಿದೆ ಎಂದು ಎಸ್‌ಡಿಪಿಐ ಆಕ್ಷೇಪ ವ್ಯಕ್ತಪಡಿಸಿತ್ತು.

ಇದು ಕೇವಲ ಒಂದು ಧರ್ಮದ ಸಂಕೇತವಾಗಿದೆ. ಇದರಿಂದ ಗಂಗಾವತಿ ನಗರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತದೆ ಎಂದು ಆರೋಪಿಸಿ ಇದನ್ನು ತೆರವುಗೊಳಿಸುವಂತೆ ಗಂಗಾವತಿ ನಗರಸಭೆ ಕಮಿಷನರ್‌ಗೆ SDPI ಮನವಿ ಮಾಡಿತ್ತು. ಮನವಿ ಬೆನ್ನಲ್ಲೇ ವಿದ್ಯುತ್ ಕಂಬಗಳ ತೆರವಿಗೆ ತಹಶೀಲ್ದಾರ್‌ ಆದೇಶಿಸಿದ್ದಾರೆ.



Join Whatsapp