ಮೈಸೂರು ಅತ್ಯಾಚಾರ ಆರೋಪಿಗಳನ್ನು ಹೈದರಾಬಾದ್ ಮಾದರಿಯಲ್ಲಿ ಶಿಕ್ಷಿಸಿ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

Prasthutha|

ಬೆಂಗಳೂರು: ಇತ್ತೀಚೆಗೆ ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಹೈದರಾಬಾದ್ ಮಾದರಿಯಲ್ಲಿ ಶಿಕ್ಷೆಗೊಳಪಡಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ .

ಚೆನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ನಡೆದಿರುವ ಇಂತಹ ಕ್ರೂರ ಕುಕೃತ್ಯವನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ದುಷ್ಕರ್ಮಿಗಳನ್ನು ಗುಂಡು ಹಾರಿಸಿ ಕೊಲ್ಲುವುದು ಸೂಕ್ತವೆಂದು ತಿಳಿಸಿದರು. ಕೃತ್ಯ ನಡೆದ ಸ್ಥಳದಲ್ಲಿ ಅರೋಪಿಗಳು ಮದ್ಯ ಸೇವನೆ ನಡೆಸಿರುವ ವರದಿಯನ್ನು ಗಮನಿಸಿದ ಕುಮಾರಸ್ವಾಮಿ ಕರ್ನಾಟಕ ಸರ್ಕಾರ ನಿರ್ಜನ ಸ್ಥಳದಲ್ಲಿ ಮದ್ಯ ಸೇವನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೆ ಮುಂದಾಗಬೇಕಿದೆಯೆಂದು ತಿಳಿಸಿದರು.

- Advertisement -

2019 ರಲ್ಲಿ ಹೈದರಾಬಾದ್ ನಲ್ಲಿ ಮಹಿಳಾ ವೈದ್ಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮೂಲಕ ಕೊಲೆ ನಡೆಸಿದ್ದರೆಂದು ಈ ಸಂದರ್ಭದಲ್ಲಿ ನೆನೆಸಿ ಈ ಹೇಳಿಕೆ ನೀಡಿದರು . ಮಾತ್ರವಲ್ಲ ಕರ್ನಾಟಕ ಪೊಲೀಸರು ಕೂಡ ಅರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದಲಿ ಎಂದು ಅವರು ಶುಕ್ರವಾರ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.

ಮೈಸೂರು ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಾಯಕರ ನಡುವೆ ಏರ್ಪಟ್ಟಿರುವ ಶೀತಲ ಸಮರದ ಮಧ್ಯೆ ಕುಮಾರಸ್ವಾಮಿ ಅವರ ಈ ವಿವಾದಾತ್ಮಕ ಹೇಳಿಕೆಯು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಮಂಗಳವಾರ ಸಂಜೆ 7.30 ಗಂಟೆ ಸುಮಾರಿಗೆ ಸಂತ್ರಸ್ತೆ ಯುವತಿ ಮತ್ತು ಆಕೆಯ ಸ್ನೇಹಿತ ಚಾಮುಂಡಿ ಬೆಟ್ಟದಿಂದ ಮನೆಗೆ ಮರಳುತ್ತಿದ್ದಾಗ 6 ಮಂದಿಯ ದುಷ್ಕರ್ಮಿಗಳ ತಂಡ ಇಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ ಆಕೆಯನ್ನು ಸಾಮೂಹಿಕವಾಗಿ ಅತ್ಯಾಚಾರಕ್ಕೊಳಪಡಿಸಿತ್ತು.

ಘಟನೆಯಲ್ಲಿ ಭಾಗಿಯಾದ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದೆಯೆಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

- Advertisement -