ಹಾರ-ತುರಾಯಿ ನಿಷೇಧ ಕೈಬಿಡುವಂತೆ ಒತ್ತಾಯಿಸಿ ಪುಷ್ಪ ಬೆಳೆಗಾರರಿಂದ ಪ್ರತಿಭಟನೆ

Prasthutha|

ಬೆಂಗಳೂರು: ಕೊರೋನಾ ಸಂಕಷ್ಟದಿಂದ ಈಗತಾನೇ ಚೇತರಿಸಿಕೊಳ್ಳುತ್ತಿರುವ ರಾಜ್ಯದ ಹೂವು ಬೆಳೆಗಾರ ರೈತರ ಮೇಲೆ ಗದಾಪ್ರಹಾರ ಮಾಡುವ ತೀರ್ಮಾನವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಗುರುವಾರ ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಮಾರುಕಟ್ಟೆಯಲ್ಲಿ ಪುಷ್ಪ ಬೆಳೆಗಾರರು ಹಾಗೂ ಮಾರಾಟಗಾರರು ಪ್ರತಿಭಟನೆ ನಡೆಸಿದರು.
 
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಕ್ಷಿಣ ಭಾರತ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷರ ಟಿ. ಎಂ. ಅರವಿಂದ್‌ ಮಾತನಾಡಿ, ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ರವಿಕುಮಾರ್‌, ಸರಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ನೀಡದಂತೆ ಆದೇಶ ಹೊರಡಿಸಿದ್ದಾರೆ. ಇದು ರಾಜ್ಯದ 7500 ಹೆಕ್ಟೇರ್‌ ಪ್ರದೇಶದಲ್ಲಿ ಪುಷ್ಪ ಕೃಷಿಯಲ್ಲಿ ತೊಡಗಿಕೊಂಡಿರುವ ಸಾವಿರಾರು ಜನ ರೈತರ ಕುಟುಂಬಗಳ ಮೇಲಿನ ಗದಾಪ್ರಹಾರವಾಗಿದೆ. ಈ ನಿರ್ಧಾರದ ಹಿಂದೆ ಯಾವುದೇ ವೈಜ್ಞಾನಿಕ ಅಥವಾ ಸಂಶೋಧನಾತ್ಮ ಅಂಶಗಳ ಕಂಡು ಬರುತ್ತಿಲ್ಲ. ಈ ನಿಷೇಧದಿಂದಾಗಿ ಕೊರೋನಾ ಸಂಕಷ್ಟದಿಂದ ತೊಂದರೆಗೀಡಾಗಿರುವ ಪುಷ್ಪ ಬೆಳೆಗಾರರ ಚೇತರಿಕೆ ಮತ್ತಷ್ಟು ನಿಧಾನವಾಗುತ್ತದೆ. ವರ್ಷಗಳಿಂದ ಯಾವುದೇ ಸಭೆ ಸಮಾರಂಭಗಳು ನಡೆಯದೇ ತೊಂದರೆಗೀಡಾಗಿದ್ದ ರೈತರು ಇನ್ನಷ್ಟು ಕಷ್ಟಕ್ಕೆ ಸಿಲುಕಿಕೊಂಡು ಆತ್ಮಹತ್ಯೆಯಂತಹ ದಾರಿಯನ್ನು ಕಂಡುಕೊಳ್ಳುವಂತಾಗಿದೆ. ಕೋಟ್ಯಂತರ ರೂಪಾಯಿಗಳ ಹಣವನ್ನು ತೊಡಗಿಸಿ ಪುಷ್ಪ ಕೃಷಿಯಲ್ಲಿ ತೊಡಗಿಕೊಂಡಿರುವರು ಬಹಳಷ್ಟು ಸಂಕಷ್ಟಕ್ಕೆ ಬೀಳುವಂತಾಗಿದೆ ಎಂದು ಹೇಳಿದರು.

- Advertisement -


 
ಫ್ಲವರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷ ಶ್ರೀಕಾಂತ್‌ ಬೊಲ್ಲಪಳ್ಳಿ ಮಾತನಾಡಿ, ಪುಷ್ಪ ಕೃಷಿ ಕ್ಷೇತ್ರ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುತ್ತಿದೆ. 7500 ಹೆಕ್ಟೇರ್‌ ನಷ್ಟು ಭೂಮಿಯಲ್ಲಿ ಗ್ರೀನ್‌ ಹೌಸ್‌ ಮೂಲಕ ಪುಷ್ಪ ಕೃಷಿಯನ್ನು ನಡೆಸಲಾಗುತ್ತಿದೆ. ಅಲ್ಲದೆ, ಇದನ್ನು ಹೊರಪಡಿಸಿ ಲಕ್ಷಾಂತರ ಎಕರೆಗಳಲ್ಲಿ ಹೂವನ್ನು ಬೆಳೆಯಲಾಗುತ್ತಿದೆ. ಒಂದು ಎಕರೆಯಲ್ಲಿ ಸುಮಾರು ಆರು ಜನ ಒಂದು ಹೆಕ್ಟೇರ್‌ ನಲ್ಲಿ ಸುಮಾರು 15 ಜನರು ಕಾರ್ಯನಿರ್ವಹಿಸುತ್ತಾರೆ. ಬೆಂಗಳೂರು ನಗರ ದೇಶದ ಪುಷ್ಪೋದ್ಯಮದ ಪ್ರಮುಖ ಹಬ್‌ ಆಗಿದ್ದು, ಬೆಂಗಳೂರಿನಿಂದ ದೇಶ ಹಾಗೂ ವಿದೇಶಕ್ಕೆ ಹೂಗಳು ರಫ್ತಾಗುತ್ತವೆ. ವಿದೇಶಿ ವಿನಿಮಯ ಹಾಗೂ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಪುಷ್ಪ ಕೃಷಿಗೆ ಈ ರೀತಿ ನಿಷೇಧ ಹೇರುವ ಮೂಲಕ ಹೊಡೆತ ನೀಡುವುದು ಸರಿಯಲ್ಲ ಎಂದು ಹೇಳಿದರು.
 
ರಾಜ್ಯದ ಹೂ ಬೆಳೆಗಾರ ರೈತರು ಹಾಗೂ ಪುಷ್ಪೋದ್ಯಮದಲ್ಲಿ ತೊಡಗಿಕೊಂಡಿರುವ ಲಕ್ಷಾಂತರ ಜನರ ಜೀವನ ಆಧಾರ ಉದ್ಯಮಕ್ಕೆ ಈ ರೀತಿ ಕೊಡಲಿ ಪೆಟ್ಟು ನೀಡುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

Join Whatsapp