ಮುಂಬೈ: ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿಶ್ವಾಸಮತ ಯಾಚನೆಗೆ ಕರೆಯುವ ಮೊದಲೇ ರಾಜೀನಾಮೆ ನೀಡಿದ್ದರಿಂದ ವಿಶ್ವಾಸಮತ ಯಾಚನೆ ನಡೆಸುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಹೇಳಿದ್ದಾರೆ.
ರಾಜ್ಯಪಾಲರ ಆದೇಶದಂತೆ, ಈಗ ವಿಶ್ವಾಸಮತ ಯಾಚನೆಯ ಅಗತ್ಯವಿಲ್ಲ, ಆದ್ದರಿಂದ ಇಂದಿನ ವಿಶೇಷ ಅಧಿವೇಶನವನ್ನು ಕರೆಯಲಾಗುವುದಿಲ್ಲ ಎಂದು ಎಲ್ಲಾ ರಾಜ್ಯ ಶಾಸಕರಿಗೆ ರಾಜೇಂದ್ರ ಭಾಗವತ್ ಮಾಹಿತಿ ನೀಡಿದ್ದಾರೆ.
ರಾಜ್ಯಪಾಲ ಬಿ.ಎಸ್.ಕೋಶ್ಯಾರಿ ಅವರ ನಿರ್ದೇಶನದಂತೆ ಜೂನ್ 30 ರಂದು ವಿಶ್ವಾಸಮತ ಯಾಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕೆಲವೇ ನಿಮಿಷಗಳ ನಂತರ, ಉದ್ಧವ್ ಠಾಕ್ರೆ ಬುಧವಾರ ರಾತ್ರಿ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಮತ್ತು ತಮ್ಮ ಎಂಎಲ್ಸಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು.
ಮುಖ್ಯಮಂತ್ರಿ ಸ್ಥಾನ ಮತ್ತು ವಿಧಾನ ಪರಿಷತ್ ಸ್ಥಾನ ಎರಡಕ್ಕೂ ನಾನು ರಾಜೀನಾಮೆ ನೀಡುತ್ತಿದ್ದೇನೆ. ಏಕೆಂದರೆ ನಾಳೆ ಶಿವ ಸೈನಿಕರ ಕೈಯಲ್ಲಿ ರಕ್ತ ಕಾಣುವುದಕ್ಕೆ ನಾನು ಬಯಸುವುದಿಲ್ಲ’ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.